ವಿಟ್ಲ: ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಾಗ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಒಂದು ಕಡೆ ಸೇರಿ ಚರ್ಚೆ ನಡೆಸಿದಾಗ ಕೆಲಸ ಕಾರ್ಯಗಳಿಗೆ ವೇಗ ಸಿಗಲು ಸಾಧ್ಯ ಎಂದು ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.
ಅವರು ಅಳಿಕೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಪ್ರಥಮ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಡಿಪಿ ಸಭೆಯಲ್ಲಿ ಆಗುವ ಚರ್ಚೆ ಹಾಗೂ ನಿರ್ಣಯಗಳು ಸರಕಾರಕ್ಕೆ ಕಳುಹಿಸಿ ಕೊಡುವ ಕಾರಣ ಚರ್ಚೆಗಳು ಸರಿಯಾಗಿ ನಡೆಯಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಸ್.ಕೆ ಸರಿಕಾರ ಮಾತನಾಡಿ ಇಲಾಖೆಯಿಂದ ಬೇಡಿಕೆಯನುಸಾರವಾಗಿ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಕೃಷಿ ಪರಿಕರಗಳನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತಿದೆ. 3 ಮೀಟರ್ ಅಗಲದ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವಿದ್ದು, ದಾಖಲೆಗಳನ್ನು ನೀಡಿದಲ್ಲಿ ಅನುದಾನ ನೀಡಲಾಗುತ್ತದೆ. ಸಾವಯವ ಗೊಬ್ಬರವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಕೆ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೋಲಾಕ್ಷಿ, ಸ್ಥಳೀಯ ಶಾಲೆಗಳ ಈಶ್ವರ ನಾಯ್ಕ್, ನಾರಾಯಣ ನಾಯ್ಕ್, ಗೀತಾ ವಿ., ಅಂಗನವಾಡಿ ಸಹಾಯಕರಿಯರು ಹಾಜರಿದ್ದು ಮಾಹಿತಿ ನೀಡಿದರು.
ಪಿಡಿಒ ಜಿನ್ನಪ್ಪ ಗೌಡ ಜಿ., ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಎಂ.ಸದಾಶಿವ ಶೆಟ್ಟಿ, ಜಗದೀಶ್ ಶೆಟ್ಟಿ ಮುಳಿಯಗುತ್ತು, ಮುಕಾಂಬಿಕಾ ಜಿ. ಭಟ್, ಸರೋಜ ಬಿ., ರವೀಶ, ಅಬ್ದುಲ್ಲ ರಹಿಮಾನ್ ಉಪಸ್ಥಿತರಿದ್ದರು.