ಅಂತರಂಗದ ಆಪ್ತಸಖ ನೀನು….
ಇದೊಂದು ಭ್ರಮೆ ತಾನೆ ಈವರೆಗೂ ನನ್ನ ಜೀವಂತವಿರಿಸಿದ್ದು…
ದಿನದಿನಕ್ಕೂ ಕೃಶವಾಗುವ ದೇಹದಲ್ಲಿ
ಉಸಿರು ಬಿಗಿಹಿಡಿಯುವಂತೆ ಮಾಡಿದ್ದು…!
ಚಿಲಕ ಹಾಕಿ ಬಂಧಿಸಿದ ಒಂಟಿ ಕೊಠಡಿಯೊಳಗೆ
ನನ್ನೆದೆಯ ಭಾವಗಳು ನಿಟ್ಟುಸಿರಗೈಯುತಿವೆ….
ಯಾರಿಗೂ ಹೇಳಲಾಗದೆ
ಒಳಗೊಳಗೇ ಬೇಯುತ್ತವೆ….!
ಒಂದಿನಿತೂ ಸುಳಿವು ಸಿಗದ ಹಾಗೆ
ಪ್ರೀತಿಯ ನಾಟಕವಾಡಿದೆ…
ಅದೆಷ್ಟು ಸಹಜ ನಟನೆ ನಿನದು
ಪದೇ ಪದೇ ನಾ ಮೋಸ ಹೋಗುತ್ತಲೇ ಇದ್ದೆ!!
ಮಗುವಿನಂತಹ ಮುಗ್ಧ ಮುಖದಲಿ
ವಂಚನೆಯ ನೆರಳು ಕಾಣಿಸಲೇ ಇಲ್ಲ….
ತಪ್ಪು ನಿನ್ನದಲ್ಲವೋ ಗೆಳೆಯಾ,
ಹಿಂದು ಮುಂದು ಯೋಚಿಸದೆ ಪೂರ್ಣ ಶರಣಾಗತಿ
ನನ್ನದೇ ಸ್ವಯಂಕೃತಾಪರಾಧ….!!
ಹುಚ್ಚುಮನಸು!!
ಅದೇಕೋ ಈಗಲೂ ನಿನ್ನ ಮೋಸಗಾರನೆನ್ನಲು ಮನಸಾಗುತಿಲ್ಲ
ಅದಷ್ಟು ದಿನಗಳ ವಂಚನೆಯೂ ಮರೆತುಬಿಡುವೆ…
ದಯವಿಟ್ಟು ನಿನ್ನ ಮುಖವಾಡವನ್ನೊಮ್ಮೆ ಕಳಚಿ ಬಂದುಬಿಡು!!!
*ಪ್ರಮೀಳಾ ರಾಜ್*