ನೀ ಮುನಿಸಕೊಂಡಾಗ
ನನ್ನ ಈ ಮನ ಅಮವಾಸೆಯ ಕಪ್ಪು
ಆ ದಿನದ ಸಾಗರ ಮೌನ
ನೀ ನಕ್ಕಾಗಲೆಲ್ಲಾ
ನನ್ನೆದೆಯ ಆಗಸದಲ್ಲಿ
ಕೋಟಿ ತಾರೆಗಳ ಮಿನುಗು
*
ನಿನ್ನ ಕಂಗಳ ಕಾಂತಿಯಲ್ಲಿ
ಪೌರ್ಣಮಿಯ ಚಂದ್ರ ಪ್ರಭೆ
ನನ್ನ ಬೇಸರಗಳಿಗೆ ಹಚ್ಚಿಟ್ಟ ಪಟಾಕಿ
ಅದರಿಂದ ಹೊತ್ತಿ ಝಗಮಗಿಸಿದ
ಬಹು ಎತ್ತರದ ಹೊಳೆಹು
*
ಅವಳು ನನಗೆಂದೇ ಹಚ್ಚಿದಷ್ಟು
ಭರವಸೆಗಳ ಸುರಸುರ್ ಬತ್ತಿ
ನಾ ಮೇಲೆ ಜಿಗಿಯುವ ಆತುರ
ನಿರೀಕ್ಷೆಗಳ ಹೊತ್ತು ಆಕಾಂಕ್ಷೆಗಳತ್ತ
*
ಅವಳು ಬರುವವರೆಗೂ
ನನಗೆ ತಿಳಿದಿರಲಿಲ್ಲ
ನಾನು ನನ್ನದೇ ಕತ್ತಲೆಯಲ್ಲಿ ಇದ್ದೆನೆಂದೂ

ಅವಳು ಕೈ ಹಿಡಿದಾಗಲೇ ಗೊತ್ತಾಗಿದ್ದು
ಬೆಳ್ಳನೆ ಬೆಳಗಿನ ಸ್ಪರ್ಶ
*
ಕತ್ತಲೆಯಲ್ಲಿ ಅವಳ ಕಣ್ಣು
ಹಗಲಿನಲ್ಲಿ ಹೆಗಲಾಗುವ ನಗು
ಅವಳ ಸಹವಾಸ ಒಳ್ಳೆಯತನ
ಕತ್ತಲೆ ಇಲ್ಲ ಈಗ
ಬೆಳಕೊಂದೇ ಇರುವುದು
*
ಕಷ್ಟಗಳು ಏನೇ ಇದ್ದರೂ
ಅವಳು ಖುಷಿಯಾದಾಗ ಅನಿಸುವದು
ಹಚ್ಚಿ ಇಟ್ಟಂತೆ ಸದಾ ಸಾವಿರ ದೀಪ

ಅವಳು ಜೊತೆಗಿದ್ದರೆ ಸಾಕು
ಸಾಲು ಸಾಲು ಬೆಳದಿಂಗಳ ನೃತ್ಯ
ಅವಳೇ ಸತ್ಯ ನಿತ್ಯ ದೀಪಾವಳಿ

 

*ಬಸವರಾಜ ಕಾಸೆ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here