ಕೂಡಿಕೊಂಡೆ ಹೋದೆನು
ಕೇಳಿಕೊಳ್ಳಿ ಯಾರಾದರೂ
ಹೊತ್ತುಕೊಂಡೆ ಬಂದೆನು
ನೋಡಿಕೊಳ್ಳಿ ಎಲ್ಲರೂ
ನನ್ನ ಹೆಸರ ಹಿಂದು ಮುಂದು
ಬಿರುದು ಬಾವಲಿಗಳೇ ಅಂದು ಇಂದು
ಕಣ್ಣು ಹೊಡೆದು ಸನ್ನೆಯಲ್ಲಿ ಕನಸು
ವ್ಹಾರೆ ವಾ ಅಂತು ಮನಸ್ಸು
ಕೈ ಚಾಚಿದಷ್ಟೇ
ನೆಗೆದೆ ಆಗಸದೆತ್ತರ
ಗಾಳಿಯಲ್ಲಿ ತೇಲಿ
ದಾಟಿ ನಕ್ಕೆ ಸಾಗರ
ಸಿರಿಗನ್ನಡ ಸಂಸ್ಕೃತಿಯ
ಸ್ವಯಂಘೋಷಿತ ರಾಯಭಾರಿಯು ನಾ
ಹೊಸಗನ್ನಡ ಕವಿಗಳ
ಪ್ರೇಮಪೋಷಕ ಮುಕುಟಮಣಿಯು ನಾ
ಹೊಗಳೊಗಳಿ ಏರಿಸಿ
ನಾನೇರದೆ ಹೊನ್ನಶೂಲ
ಆನಂದಿಸಿ ಅಲ್ಲೇ ನಲಿದು
ಹೊದಿಸುವೆ ನಿಮಗೂ ಶಾಲು
ಸಹಕರಿಸುವವರೆಲ್ಲಾ ಒಳ್ಳೆಯವರು
ವಿರೋಧಿಸುವವರೆಲ್ಲಾ ಕೆಟ್ಟವರು
ಹೊಗಳೋರೆಲ್ಲಾ ನಮ್ಮವರು
ತೆಗಳೋರೆಲ್ಲಾ ಯಾರವರು
ಇರಲಿ ಯಾವುದೇ ಪ್ರಶಸ್ತಿ
ಆಚಾರ ವಿಚಾರ ಆಮೇಲೆ
ಕೊಟ್ಟು ಮೆಚ್ಚುಗೆಗೆ ಪಾತ್ರರಾಗಿ
ನಾ ಕೇಳುವ ಮೊದಲೇ
ತೆಗೆದುಕೊಂಡರೂ ಎಷ್ಟು
ಇಂಗದು ಹಸಿವು
ಸೇರಿಸಿ ಪಟ್ಟಿಯಲ್ಲಿ
ತಣಿಯುವವರೆಗೂ ದಣಿವು
ರತ್ನಾ ರತ್ನಾ
ಹೇಳಿ ಹೋಗಿ ರತ್ನಂಗೂ
ಆಗಿ ಬಂದೆ ರತುನ
ಪದ್ಮಾ ಪದ್ಮಾ
ತೋರಿಸಿ ನೋಡಿ ಪದ್ಮಂಗೂ
ಹೊಮ್ಮಿದೆ ನಾನಾಗಿ ಪದುಮ
ಆದರ್ಶನಿಗೂ ಅದೃಶ್ಯ
ನಾ ಈ ಸಮಾಜಕ್ಕೆ ಆದರ್ಶ
ಇರೋ ಬರೋ ಪದಕಗಳಿಗೆ
ನಂದೆ ಅಂತೆ ಸ್ಪರ್ಶ
ನಂದಾಗುವವು ನಂದಾದೀಪಗಳು
ನೆನೆಯುವವು ನೊಂದ ಬತ್ತಿಗಳು
ನಾನೀ ನಾಡಿಗೆ ಭೂಷಣ
ನನಗೆಂದೇ ಅರಳಬೇಕು ಹೂಗಳು
ಮೆರೆಯಬೇಕು ಇನ್ನೂ
ಹಂಗೀಗ ಅಲ್ಲ
ಸಾಕಾಗದು ಅಂಬಾರಿ
ತೋರಿಸುವೆ ಒಮ್ಮೆ ಹೆಂಗೆಲ್ಲಾ
*ಬಸವರಾಜ ಕಾಸೆ*