ಬಂಟ್ವಾಳ: ಎಸ್.ವಿ.ಎಸ್ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ರ್‍ಯಾಗಿಂಗ್, ಡ್ರಗ್ ಎಬ್ಯುಸ್, ಪರಿಸರನಾಶ ಮತ್ತು ಲೈಂಗಿಕ ದೌರ್ಜನ್ಯ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅರಿವು ಮತ್ತು ನಿಯಂತ್ರಣ ಎಂಬ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ವಿಶ್ವವಿದ್ಯಾನಿಲಯದ ಸುತ್ತೋಲೆಯಂತೆ ಈ ಕಾರ್ಯಾಗಾರದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಸ್ಥಳೀಯ ಕಾಲೇಜುಗಳಾದ ಕಾರ್ಮೆಲ್ ಕಾಲೇಜು ಮೊಡಂಕಾಪು, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಮತ್ತು ಎಲ್.ಸಿ.ಆರ್ ಇಂಡಿಯನ್ ಕಾಲೇಜು ಕಕ್ಕೆಪದವು ಇಲ್ಲಿಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ನಿವೃತ ಆರೋಗ್ಯ ಪರಿವೀಕ್ಷಕರಾದ ಜಯರಾಮ ಪೂಜಾರಿ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಯರಾಮ ಪೂಜಾರಿ ರ್‍ಯಾಗಿಂಗ್ ಪಿಡುಗು ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತದೆ. ಬುದ್ಧಜೀವಿಗಳಾದ ನಾವು ರ್‍ಯಾಗಿಂಗ್ ಪರಿಣಾಮ ಅರಿತು ಅದರಿಂದ ನಮ್ಮ ಸಮಾಜವನ್ನು ರಕ್ಷಿಸಬೇಕೆಂದು ಕರೆಯಿತ್ತರು.
ಲ್ಯೆಂಗಿಕ ದೌರ್ಜನ್ಯ ಪಿಡುಗಿಗೆ ಸಂಬಂಧಿಸಿದಂತೆ ಮಾತನಾಡಿದ ಇವರು ಇಂದ್ರಿಯ ನಿಗ್ರಹದ ಮಹತ್ವವನ್ನು ಅರಿತು ಹೆಣ್ಣನ್ನು ನೋಡುವ ದೃಷ್ಟಿ ಬದಲಾಯಿಸಿಕೊಂಡು ಲ್ಯೆಂಗಿಕ ದೌರ್ಜನ್ಯದಂತಹ ತಪ್ಪು ಕಾರ್ಯ ನಡೆಯದಂತೆ ಜಾಗೃತವಾಗುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆಯಿತ್ತರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿ ಮಾತನಾಡಿದ ಜಯರಾಮ ಪೂಜಾರಿ ಕೃಷಿ ಭೂಮಿಯನ್ನು ಉಳಿಸದ ಹೊರತು ಪ್ರಕೃತಿಯನ್ನು ಉಳಿಸುವುದು ಕಷ್ಟಸಾಧ್ಯ. ನೀರು ಕೆವಲ ನೀರಲ್ಲ ಅದು ಜೀವ ಜಲ ಆದುದರಿಂದ ವರ್ತಮಾನ ಸಮಯದಲ್ಲಿ ಜಲ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಗಿಡ ಮರಗಳನ್ನು ಉಳಿಸುವ, ಅವುಗಳ ಮಾರಣ ಹೋಮವನ್ನು ತಡೆಯುವ ಮತ್ತು ಪ್ರತಿಯೊಬ್ಬರು ನಾಲ್ಕೈದು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಬೆಕೆಂದು ಕರೆಯಿತ್ತರು.
ಮಾದಕ ದ್ರವ್ಯ ವ್ಯಸನಗಳ ಬಗ್ಗೆ ಮಾತನಾಡಿ ಮಾದಕ ದ್ರವ್ಯ ವ್ಯಸನದಿಂದ ವ್ಯಕಿನಾಶ, ಕುಟುಂಬನಾಶ ಮತ್ತು ಸಮಾಜ ನಾಶವಾಗುತ್ತದೆ ಇವುಗಳ ಪಿಡುಗಿನಿಂದಾಗುವ ಹಾನಿಯನ್ನು ಅರಿತು ವಿದ್ಯಾರ್ಥಿ ಸಮುದಾಯ ಜಾಗೃತಗೊಂಡರೆ ಸಮಾಜ ಖಂಡಿತ ವಾಗಿಯೂ ಈ ಸಮಸ್ಯೆಗಳಿಂದ ಮುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಇವರು ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳವುದರ ಮೂಲಕ ವ್ಯಸನಮುಕ್ತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ಕರೆಯಿತ್ತರು. ಕಾಲೇಜಿನ ಎನ್.ಎಸ್.ಎಸ್ ಘಟಕಗಳ ವತಿಯಿಂದ ನಡೆಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿಯಾದ ಡಾ| ಮಂಜುನಾಥ ಉಡುಪ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಇನ್ನೋರ್ವ ಅಧಿಕಾರಿಯಾದ ಶಶಿಕಲಾ ಎಮ್ ಪಿ ವಂದಿಸಿದರು. ಘಟಕ ನಾಯಕಿ ಗೌತಮಿ ಕಾರ್ಯಕ್ರಮ ನಿರ್ವಹಿಸಿದರು. ಸ್ವಯಂ ಸೇವಕ ಭರತ್ ಪಾರ್ಥಿಸಿದರು.