ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಪಟಾಕಿ ಸದ್ದು ಅದಷ್ಟೇ ಮೇಲ್ನೋಟಕ್ಕೆ ಕಾಣಸಿಗುವುದು. ಆದರೆ ಈ ಹಬ್ಬದ ಆಚರಣೆ ಹಿಂದೆ ಹಲವು ಪುರಾಣ ಕಾಲದ ಕತೆ, ಸಂಪ್ರದಾಯ, ಸಂಸ್ಕೃತಿ ಇದೆ. ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು ಅಜ್ಞಾನವೆಂಬ ಕತ್ತಲೆಯನ್ನು ಅಳಿಸಿ ಬೆಳಕೆಂಬ ಜ್ಞಾನವನ್ನು ಪಸರಿಸುವ ಬೆಳಕಿನ ಹಬ್ಬವಾಗಿದೆ. ರೈತರಿಗೆ ನೆಲ-ಜಲದ ಹಬ್ಬವಾದರೆ ವಿದ್ಯಾರ್ಥಿಗಳಿಗೆ ಜ್ಞಾನವೆಂಬ ಬೆಳಕಿನ ಹಬ್ಬವಾಗಿದೆ. ಲೋಕಕಲ್ಯಾಣಕ್ಕಾಗಿ ನರಕಾಸುರನನ್ನು ಚತುದರ್ಶಿಯಂದು ಶ್ರೀಕೃಷ್ಣನ್ನು ವಧಿಸಿರುತ್ತಾನೆ, ಈ ದಿನವನ್ನು ನರಕಚತುದರ್ಶಿಯಾಗಿ ಆಚರಿಸಲಾಗುತ್ತದೆ. ಮಾರನೆಯ ದಿನ ದೀಪಾವಳಿಯ ಅಮಾವ್ಯಾಸೆಯಾಗಿದ್ದು ಈ ದಿನ ಲಕ್ಷ್ಮೀಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವ್ಯಾಸೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹಾದನಾಂಧದಿಂದ ದೀಪರಾಧನೆಯೊಡನೆ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಹಬ್ಬದ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಅವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಈ ದಿನ ಬಲೀಂದ್ರ ಪೂಜೆಯೂ ನಡೆಯತ್ತದೆ. ಎಂದು ದೀಪಾವಳಿ ಹಬ್ಬದ ಮಹತ್ವವನ್ನು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ವಿದ್ಯಾರ್ಥಿಗಳಿಗೆ ಶುಭಹಾರೈಸುತ್ತಾ ತಿಳಿಸಿದರು.
ವಿದ್ಯಾರ್ಥಿಗಳು ದೀಪಪ್ರಜ್ವಲನೆ ಮಾಡಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ವೇದವ್ಯಾಸ ಮಂದಿರದಲ್ಲಿ ವಿದ್ಯಾರ್ಥಿಗಳನ್ನು ಸಾಲಾಗಿ ಕುಳ್ಳಿರಿಸಿ ಅವರ ಕೈಗೆ ಮಣ್ಣಿನ ಹಣತೆ ನೀಡಲಾಯಿತು. ನಂತರ ಎಲ್ಲಾ ಅಧ್ಯಾಪಕರು ಆ ಹಣತೆಯನ್ನು ಜ್ಞಾನದ ಸಂಕೇತವಾಗಿ ಉರಿಸಿದರು. ವಿದ್ಯಾರ್ಥಿನಿಯರಾದ ಆದಿಶ್ರೀ ಹಾಗೂ ಅನಘಾ ಪ್ರೇರಣಾ ಗೀತೆ ಹಾಡಿದರು. ಈ ರೀತಿಯಾಗಿ ವಿಶೇಷ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಕಲ್ಲಡ್ಕ ಶ್ರಿರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ನಿರ್ವಹಿಸಿದರು. ಹಾಗೂ ಎಲ್ಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.