Thursday, April 11, 2024

ಸ್ಯಾಕ್ಸೋಪೋನ್ ವಾದಕ ಕದ್ರಿಗೋಪಾಲನಾಥ್ ಸ್ವರ ಮಾಧುರ್ಯಕ್ಕೆ ವಿರಾಮದ ಚುಕ್ಕಿ

ಬಂಟ್ವಾಳ: ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಸ್ವರ ಮಾಧುರ್ಯಕ್ಕೆ ಇಂದು ಬೆಳಿಗ್ಗೆ ವಿರಾಮದ ಚುಕ್ಕಿ ನೀಡಿದ್ದಾರೆ.
ಅವರು ಇಂದು ಬೆಳಿಗ್ಗೆ ವೇಳೆ ಮಂಗಳೂರು ಎ.ಜೆ.ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ ಎಂದು ಅಸ್ಪತ್ರೆಯ ಮೂಲಗಳು ತಿಳಿಸಿವೆ.
ಕೆಲದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು ಎ.ಜೆ.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕದ್ರಿಯವರ ಪತ್ನಿ ಮತ್ತು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮಂಗಳೂರು ಪದವಿನಂಗಡಿ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ,  ಎಂದು ಮನೆಯವರು ತಿಳಿಸಿದ್ದಾರೆ.

ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ.
ಜೀವನ:
ಗೋಪಾಲನಾಥ್‌ರವರು 1950ರ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ಗಂಗಮ್ಮನವರು.
ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು. ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸ್ಯಾಕ್ಸಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.
ಗುರು ಅನುಗ್ರಹ:
ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ವಿ. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.
ವಿಶ್ವದಾದ್ಯಂತ ಕಛೇರಿಗಳು:
ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಡುತ್ತಾಬಂದಿದ್ದಾರೆ.
ಸ್ಯಾಕ್ಸೊಫೋನ್ಗೆ ಮತ್ತೊಂದು ಹೆಸರು:
ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ. ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ ‘ಸಂಗೀತ-ಕಛೇರಿ’ಗಳನ್ನು ನಡೆಸುತ್ತಾ ಬಂದಿರುವ ‘ಕದ್ರಿ ಗೋಪಾಲನಾಥ್’ ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ. ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ಕೊಡುಗೆ:
ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು.
ಪ್ರಶಸ್ತಿ ಗೌರವಗಳು:
ಕದ್ರಿ ಗೋಪಾಲನಾಥರಿಗೆ ಸಲ್ಲದ ಪ್ರಶಸ್ತಿಗಳೇ ಇಲ್ಲ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿವೆ.
ಕದ್ರಿಯವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ.ಜಿ.ಪಂ.ಅಧ್ಯಕ್ಷ ಸದಾನಂದ ಪೂಂಜಾ , ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಜೀಪ, ಸಜೀಪ ಮೂಡ ಮಾಜಿ ಗ್ರಾ.ಪಂ.ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.‌

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...