ಕಡಲ ತೀರದ ಭಾರ್ಗವರೆನಿಸಿಕೊಂಡ ಶಿವರಾಮ ಕಾರಂತಜ್ಜನವರ ಜನುಮದಿನ ಅಕ್ಟೋಬರ್ ಹತ್ತು. ಅವರ ಅಡಿದಾವರೆಗಳಿಗೆ ವಂದಿಸುತ್ತಾ ಈ ಲೇಖನಕ್ಕಡಿಯಿಡುತಲಿರುವೆ. ನಮಗೀಗ ಕೈಲಿ ಮೊಬೈಲಿದೆ. ಬಸ್ಸು, ಕಾರು, ರೈಲಿನಲ್ಲೂ ಸಮಯ ಸಿಕ್ಕಾಗ ಸಾಹಿತ್ಯಕ್ಕೇನಾದರೂ ಕೊಡುಗೆ ಕೊಡಬೇಕೆನಿಸಿದರೆ ಬರೆಯಬಹುದು. ಹಲವಾರು ಕವನ, ಕತೆ, ಕವಿತೆ ಅಂತರ್ಜಾಲದಲಿ ಓದಿ ತಿಳಿಯಬಹುದು. ಆದರೆ ಆಗಿನ ಕಾಲದಲ್ಲಿ ಪರರ ಸಾಹಿತ್ಯ ಕೃಷಿಯ ಬಗ್ಗೆ ಓದಬೇಕೆಂದರೆ ಪುಸ್ತಕಗಳನ್ನು, ವಾರ್ತಾ ಪತ್ರಿಕೆಗಳನ್ನು ಕೊಂಡುಕೊಂಡು, ಕುಳಿತು ಓದಿದರೆ ಮಾತ್ರ. ಬರವಣಿಗೆಗೂ ಇದ್ದುದು ಪೆನ್ನು, ಪುಸ್ತಕಗಳಷ್ಟೆ. ಅಂತಹ ಕಾಲದಲ್ಲಿ ಹಲವರ ಪುಸ್ತಕಗಳನ್ನೋದಿ, ತಮ್ಮ ಜ್ಞಾನಶಕ್ತಿ ವೃದ್ಧಿಸಿ, ಹಲವಾರು ಪುಸ್ತಕಗಳ ಬರೆದು, ಜ್ಞಾನಪೀಠ ಪ್ರಶಸ್ತಿಯೆಡೆ ತಲುಪಿರುವರೆಂದರೆ ಅದು ಅಸಾಧಾರಣ ಕಾರ್ಯ.
ಅವರ ಸಾಧಾರಣ ಬದುಕಿನ ಅಸಾಧಾರಣ ಸಾಧನೆಗಳ ಬಗ್ಗೆ ಅರಿತ ನಾವು ಅವರ ಮಟ್ಟಕ್ಕೇರಬೇಕಾದರೆ, ತುಂಬಾ ಕಲಿಯಬೇಕಿದೆ. ಒಂದೆರಡು ಕವನಗಳನ್ನೋ, ಪುಸ್ತಕಗಳನ್ನೋ ಬರೆದು ತಾವು ಕವಿಗಳು, ಸಾಹಿತಿಗಳು ಎಂದು ತಮ್ಮನ್ನು ತಾವೇ ವರ್ಣಿಸಿಕೊಳ್ಳುವ ಜನರು ಹಲವರಿಹರು. ಹಾಗೆ ಹೇಳಿಕೊಳ್ಳುವ ಮೊದಲು ಅಂಥವರು ಡಿವಿಜಿ, ಕುವೆಂಪು, ಬೇಂದ್ರೆ, ಕಾರಂತ, ಅಡಿಗ…ಹೀಗೆ ಗಣ್ಯಾತಿಗಣ್ಯ ಕವಿಗಳ ಸಾಹಿತ್ಯವನ್ನೋದಬೇಕಿದೆ. ಕವನ, ಕತೆ, ಕಾವ್ಯಗಳು ಸಾಹಿತ್ಯದ ಭಾಗಗಳು. ಅವುಗಳ ಆಳ ತಿಳಿಯದೆ ಈಜಿಗೆ ಧುಮುಕಲು ಸಾಧ್ಯವೇ?
ಬರೆಯುವ ಮೊದಲು ಓದಲು ಕಲಿಯಬೇಕು, ಮಾತನಾಡುವ ಮೊದಲು ಕೇಳಿಸಿಕೊಳ್ಳಲು ಕಲಿಯಬೇಕು. ಆಗ ಮಾತ್ರ ನಾವು ತುಂಬಿದ ಕೊಡಗಳಾಗಲು ಸಾಧ್ಯ. ಕುವೆಂಪುರವರ ಮಾತಿನಂತೆ ನಾವು ಭತ್ತ ಬೆಳೆಯುವ ಗದ್ದೆಗಳಾಗಬೇಕೆ ಹೊರತು ಅದನ್ನು ತುಂಬುವ ಚೀಲಗಳಾಗಬಾರದು. ಭತ್ತ ಬೆಳೆಯಬೇಕಾದರೆ ಬೀಜ ಹಾಕಬೇಕಲ್ಲವೇ ಗದ್ದೆಗೆ? ಆ ಬೀಜ ಸಿಗುವುದು ಓದಿ ತಿಳಿದುಕೊಳ್ಳುವುದರಲ್ಲೇ ಅಲ್ಲವೇ…ಹಾಗಾಗಿ ನಾವೆಲ್ಲಾ ಓದೋಣ. ಕವಿಗಳ, ಬರಹಗಾರರ ಅನುಭವಗಳನ್ನರಿಯುವುದರ ಜೊತೆಗೆ ನಾವೂ ಬೆಳೆಯಬಲ್ಲೆವಲ್ಲವೇ? ನೀವೇನಂತೀರಿ?

 


@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here