ಕಲ್ಲಡ್ಕ : ಜೈನ್ ಮಿಲನ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಜಿನ ಭಜನಾ ಸ್ಪರ್ಧೆ, ಪರ್ಬದ ಪುದ್ದರ್, ಭವ್ಯ ಸ್ಮರಣಾಂಜಲಿ, ದೀಪಾವಳಿ ಆಚರಣೆ ಹಾಗೂ ನೂತನ ಯುವ ಜೈನ್ ಮಿಲನ್ ಪದಾಧಿಕಾರಿಗಳ ಪದಗ್ರಹಣ ಅ.27ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಮಿಲನ್ ಬಂಟ್ವಾಳ ಅಧ್ಯಕ್ಷ ಡಾ| ಸುದೀಪ್ ಕುಮಾರ್ ಸಿದ್ದಕಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ಮಿಲನ್ ಮಂಗಳೂರು ವಿಭಾಗ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಭಜನೆ ಭಗವತ್ ಭಕ್ತರನ್ನು ಒಂದಾಗಿಸುತ್ತದೆ. ಇಂದು ಭಾಗವಹಿಸಿದ ಎಲ್ಲ ತಂಡಗಳು ಮುಂದಕ್ಕೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ವ ತಯಾರಿ ನಡೆಸಬೇಕು. ಮಹಿಳೆಯರು ಕೂಡಾ ಇದರಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಉಡುಪಿ ಜೈನ್ ಮಿಲನ್ ಅಧ್ಯಕ್ಷ ಸುಽರ್ ಕುಮಾರ್ ವೈ ಮಾತನಾಡಿ ಸಲ್ಲೇಖನ ಪೂರ್ವಕ ಸಮಾಧಿ ಹೊಂದಿದ ದಿವ್ಯಾತ್ಮರಾದ ಪರಮಪೂಜ್ಯ ರಾಷ್ಟ್ರ ಸಂತ ಶ್ವೇತ ಪಿಂಛಾಚಾರ್‍ಯ 108 ವಿದ್ಯಾನಂದ ಮುನಿ ಮಹಾರಾಜರು ಮತ್ತು ರಾಷ್ಟ್ರ ಸಂತ ಜಂಗಲ್ ವಾಲೆ ಬಾಬ ಖ್ಯಾತಿಯ ಪರಮ ಪೂಜ್ಯ 108 ಚಿನ್ನಯ ಸಾಗರ ಮುನಿ ಮಹಾರಾಜರಿಗೆ ಭಾವಪೂರ್ಣ ವಿನಯಾಂಜಲಿ ಸಲ್ಲಿಸಿದರು.
ಮಂಗಳೂರು ವಿಭಾಗದ ವಲಯ ನಿರ್ದೇಶಕ ಧನ್ಯ ಕುಮಾರ್ ರೈ ಬಂಟ್ವಾಳ ಯುವ ಜೈನ್ ಮಿಲನ್ 2019-20ರ ಸಾಲಿನ ಅಧ್ಯಕ್ಷ ಸುಮನ್ ಜೈನ್ ನೇತೃತ್ವದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮುಂದೆ ನಡೆದುಕೊಳ್ಳಬೇಕಾದ ಕ್ರಮ ಸಾಧನೆಗಳ ಬಗ್ಗೆ ವಿವರ ನೀಡಿದರು.
ಇದೇ ಸಂದರ್ಭ ಬಂಟ್ವಾಳ ಶ್ರೀ ಅದಿನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ 48 ವರ್ಷಗಳ ಪರ್ಯಂತ ಪುರೋಹಿತರಾಗಿ ಸೇವೆ ಸಲ್ಲಿಸಿದ ಅನಂತರಾಜ ಇಂದ್ರ ಅವರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಮಾಜಿ ಸದಸ್ಯೆ ರಾಜಶ್ರೀ ಎಸ್. ಹೆಗ್ಡೆ, ಸುಧಿರ್ ಕುಮಾರ್ ವೈ, ಪ್ರ.ಕಾರ್ಯದರ್ಶಿ ಸುಭಾಶ್‌ಚಂದ್ರ ಜೈನ್, ಕಾರ್ಯದರ್ಶಿ ಜಯಕೀರ್ತಿ ಉಪಸ್ಥಿತರಿದ್ದರು.
ಭಜನಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ 22 ಮಂದಿ, ಹಿರಿಯರ ವಿಭಾಗದ 21 ಮಂದಿ ಭಾಗವಹಿಸಿದರು. ತೀರ್ಪುಗಾರರಾಗಿ ಭಗವಾನ್ ದಾಸ್, ಜಿತೇಂದ್ರ ಜೈನ್ ಬೆಂಗಳೂರು, ಚಂದನಾ ಬೃಜೇಶ್ ಬಾಳ್ತಿಲ ಸಹಕರಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮೀಕ್ಷಾ ಪ್ರಾರ್ಥನೆ ನೆರವೇರಿಸಿದರು. ಸನ್ಮತಿ ಜಯಕೀರ್ತಿ ಸ್ವಾಗತಿಸಿ, ಯುವ ಜೈನ್ ಮಿಲನ್ ಕಾರ್ಯದರ್ಶಿ ಸಮೀಕ್ಷಾ ಜೈನ್ ವಂದಿಸಿದರು. ಆದಿರಾಜ ಜೈನ್ ಕೊಯಕ್ಕುಡೆ ಮತ್ತು ಉದಯ ಕುಮಾರ್ ಮದ್ವ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here