ಯಾದವ ಕುಲಾಲ್
ಬಿ.ಸಿ.ರೋಡ್ : ಕುಸಿಯುವ ಲಕ್ಷಣದಲ್ಲಿರುವ ಕಟ್ಟಡಕ್ಕೆ ಮತ್ತೆ ಸುಣ್ಣ ಬಣ್ಣ ಹಚ್ಚಿ ಹೊರಗಿನ ಶೃಂಗಾರ ಮಾಡಲಾಗುತ್ತಿದೆ. ಇದು ಮೊಡಂಕಾಪುವಿನಲ್ಲಿರುವ ಬಾಲಕರ ವಸತಿ ನಿಲಯದ ಪರಿಸ್ಥಿತಿ. ಸುಮಾರು 56 ವರ್ಷಗಳ ಹಿಂದಿನ ಕಟ್ಟಡ ಇದಾಗಿದ್ದು ಇದರ ಮೂಲ ಪಂಚಾಂಗವೇ ಬಿರುಕು ಬಿಟ್ಟಿದೆ. ಗೋಡೆಯಲ್ಲೂ ಬಿರುಕು ಕಂಡು ಬಂದಿದೆ. ಮಾಡು ಸೋರುತ್ತಿದೆ. 55 ವಿದ್ಯಾರ್ಥಿಗಳಿರುವ ಈ ಕಟ್ಟಡ ದುಃಸ್ಥಿತಿಯಲ್ಲಿದ್ದು, ನೂತನ ಕಟ್ಟಡದ ಯೋಜನೆಯನ್ನು ಹಾಕಬೇಕಾಗಿದೆ. ಆದರೆ ಇಲಾಖೆಯು ಪ್ರತೀ ವರ್ಷ ಮೈಂಟೆನೆನ್ಸ್ ಎಂದು ಹೇಳಿ ಅಲ್ಲಲ್ಲಿ ರಿಪೇರಿ ಮಾಡಿ ಕೈತೊಳಿಯುತ್ತಿದೆ. ಈ ವರ್ಷ ಹಾಸ್ಟೆಲ್ ಮೈಂಟೆನೆನ್ಸ್‌ಗೆಂದು ಅಂದಾಜು ರೂಪಾಯಿ 10 ಲಕ್ಷ ಬಿಡುಗಡೆಯಾಗಿದ್ದು ಅಲ್ಲಲ್ಲಿ ರಿಪೇರಿ ಜೊತೆಗೆ ಕಟ್ಟಡ ಪೂರ್ತಿ ಸುಣ್ಣ ಬಳಿಯಲು ಹೊರಟಿದೆ.
ಇದು ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ೧೯೭೨ರಲ್ಲಿ ಮೊಡಂಕಾಪುವಿನಲ್ಲಿ ನಿರ್ಮಾಣಗೊಂಡ ಹಾಸ್ಟೆಲ್ ಕಥೆ.  ಸುಮಾರು ೫೬ ವರ್ಷಗ ಹಿಂದೆ ಕಟ್ಟಲ್ಪಟ್ಟ ಈ ಕಟ್ಟಡ ಹಂಚು ಮಾಡಿನಿಂದ ಕೂಡಿದ್ದು ಸುತ್ತಲೂ ತೆಂಗಿನ ಮರಗಳಿರುವ ಕಾರಣ ತೆಂಗಿನ ಕಾಯಿ ಬಿದ್ದು ಹಂಚು ಪುಡಿಯಾಗುತ್ತಲೇ ಇರುತ್ತದೆ. ಆದ್ದರಿಂದ ಆಗಾಗ ಹಂಚು ಬದಲಾಯಿಸುವ ಅನಿವಾರ್ಯತೆ ಇಲ್ಲಿದೆ.
ದುರ್ಬಲ ಕಟ್ಟಡ : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸೌಕರ್ಯ ಇದ್ದರೂ ಮೂಲ ಸೌಕರ್ಯ ವ್ಯವಸ್ಥೆಯಲ್ಲೊಂದಾದ ವಸತಿ ನಿಲಯದ ಕಟ್ಟಡವೇ ಹಳೆಯದಾಗಿದ್ದು ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದು ಜೀವಿಸಬೇಕಿರುವ ಪರಿಸ್ಥಿತಿ ಕಂಡು ಬರುತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇಕಡಾ ೬೦ಕ್ಕೂ ಅಧಿಕ ಮಂದಿ ಹೊರ ಜಿಲ್ಲೆಯವರು. ದ.ಕನ್ನಡ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಸಾರ್ವತ್ರಿಕ ನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ಊರಿನವರಿಗೆ ವಸತಿ ಶಾಲೆಗಳ ಸಂಪೂರ್ಣ ಅರಿವು ಇಲ್ಲದ ಕಾರಣ ಸ್ಥಳೀಯ ವಿದ್ಯಾರ್ಥಿಗಳ ಪೋಷಕರು ಈ ಸೌಲಭ್ಯವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಇಲಾಖೆಯು ಕೂಡಾ ಹಾಸ್ಟೆಲ್ ಕಟ್ಟಡದ ಸುಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ.
ಬೇರೆ ಊರಿನಿಂದ ಬಂದಿರುವ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುವುದು ಇಲಾಖೆಯ ಕರ್ತವ್ಯವವಾಗಿದೆ. ಒಂದು ಶಾಶ್ವತ ಅನುದಾನವನ್ನು ಬಿಡುಗಡೆಗೊಳಿಸಿ ಕಟ್ಟಡವನ್ನು ಬದಲಾಯಿಸಬೇಕಾದ ಅನಿವಾರ್ಯತೆಯನ್ನು ಸರಕಾರಕ್ಕೆ ಮನದಟ್ಟು ಮಾಡಬೇಕಾಗಿದೆ. ಹಂಚಿನ ಕಟ್ಟಡವನ್ನು ಬದಲಾಯಿಸಿ ಆರ್‌ಸಿಸಿ ಕಟ್ಟಡವನ್ನಾಗಿ ಪರಿವರ್ತಿಸಿದರೆ ಮುಂದೆ ದೀರ್ಘಕಾಲ ತೊಂದರೆಯಿಲ್ಲದೆ ಕಾಲಕಳೆಯಬಹುದಾಗಿದೆ. ವಿದ್ಯಾರ್ಥಿಗಳಿಗೂ ಇದರಿಂದ ಒತ್ತಡವಿಲ್ಲದೆ ಕಲಿಯುವ ವಾತಾವರಣ ನಿರ್ಮಾಣವಾಗುತ್ತದೆ.
ಹಾಸ್ಟೆಲ್ ಕಟ್ಟಡ ರಿಪೇರಿಗಾಗಿ 10 ಲಕ್ಷ ಹಣ ಬಂದಿದ್ದು ಮಳೆಗಾಲದಲ್ಲಿ ಮಳೆ ನೀರು ಹೊರ ಬರುತ್ತಿದ್ದು ಅದರ ಹಂಚುಗಳನ್ನು ಬದಲಾವಣೆ ಮಾಡಿದ್ದೇವೆ. ಗೋಡೆಗಳಿಗೆ ಕೆಲವು ವರ್ಷಗಳಾಯಿತು ಪೈಂಟಿಂಗ್ ಆಗದೆ ಪೈಟಿಂಗ್ ಕೆಲಸವೂ ಕೈಗೆತ್ತಿಕೊಂಡಿದ್ದೇವೆ. ಹಳೇ ಕಟ್ಟಡವಾದುದರಿಂದ ಕಟ್ಟಡ ದುಸ್ಥಿತಿಯರುವುದರಿಂದ ಪ್ರತೀ ವರ್ಷ ರಿಪೇರಿ ಮಾಡುತ್ತಾ ಇದ್ದೇವೆ. ನೂತನ ಕಟ್ಟಡ ನಿರ್ಮಾಣದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
– ಮೋಹನ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here