Wednesday, October 25, 2023

ದೆಹಲಿ : ಚುಟುಕು ಸಾಹಿತ್ಯೋತ್ಸವ – 2019: ಚುಟುಕು ಸಾಹಿತ್ಯ ಪ್ರಕಾರ ಸಂವೇದನಾಶೀಲವಾಗಲಿ : ಡಾ.ಪುರುಷೋತ್ತಮ ಬಿಳಿಮಲೆ

Must read

ನವದೆಹಲಿ : ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದಿದೆ. ಚುಟುಕು ಸಾಹಿತ್ಯ ಪ್ರಕಾರವು ಜನಪ್ರಿಯವಾಗುತ್ತಿದ್ದು ಸಂವೇದನಾಶೀಲ ಪದಗಳ ಬಳಕೆಯಿಂದ ಹೊಸತನವನ್ನು ರೂಡಿಸಿಕೊಳ್ಳಬೇಕು. ಮಾತನಾಡುವ ಭಾಷೆಗಿಂತ ಭಿನ್ನವಾದ ಸಂಕೇತ ಭಾಷೆ ,ಕವನ ಬರವಣಿಗೆಯಲ್ಲಿ ಕಾಣಬೇಕಾಗಿದೆ ಎಂದು ಹೊಸದಿಲ್ಲಿಯ ಜೆ.ಎನ್.ಯು. ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಹಿರಿಯ ಸಾಹಿತಿ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದರು.


ಅವರು ದೆಹಲಿ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದೆಹಲಿಯ ಕರ್ನಾಟಕ ಸಂಘ ಸಭಾಂಗಣದಲ್ಲಿ ಏರ್ಪಡಿಸಲಾದ ಅಂತಾರಾಜ್ಯ ಮಟ್ಟದ ಚುಟಕು ಕವನ, ದೇಶ ಪ್ರೇಮ , ಪರಿಸರ ಪ್ರೇಮ, ಯೋಗ ಜಾಗೃತಿ, ಸಾಹಿತ್ಯ-ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದ.ಕ ಜಿಲ್ಲಾ ಚು.ಸಾ.ಪ.ಅಧ್ಯಕ್ಷ ತಾರಾನಾಥ ಬೋಳಾರರ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರಥಮವಾಗಿ ಏರ್ಪಡಿಸಿದ ಚುಟುಕು ಸಾಹಿತ್ಯೋತ್ಸವ 2019 ಕಾರ್‍ಯಕ್ರಮವನ್ನು ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ| ವೆಂಕಟಾಚಲ ಜಿ. ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ| ಅವನೀಂದ್ರನಾಥ ರಾವ್, ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ವೇದಮೂರ್ತಿ ಎಂ, ಜನಾರ್ಧನ ಭಟ್ ಮೊಗರ್ನಾಡು, ರಾಧಾಕೃಷ್ಣ ಕೆ. ಉಳಿಯತಡ್ಕ, ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಪ್ರಧಾನ ಕಾರ್‍ಯದರ್ಶಿ ಸಿ.ಎಂ.ನಾಗರಾಜ ಸ್ವಾಗತಿಸಿದರು. ಚು.ಸಾ.ಪ. ಕಡಬ ವಲಯ ಗೌರವಾಧ್ಯಕ್ಷ ಜಯಾನಂದ ಪೆರಾಜೆ ಪ್ರಸ್ತಾವನೆಗೈದು ಆಶಯ ನುಡಿ ಹೇಳಿದರು. ಜಿಲ್ಲಾ ಕಾರ್‍ಯದರ್ಶಿ ಹ.ಸು. ಒಡ್ಡಂಬೆಟ್ಟು ವಂದಿಸಿದರು. ಸುರೇಖ ಯಳವಾರ ಬಂಟ್ವಾಳ ನಿರೂಪಿಸಿದರು.


ದೆಹಲಿ ಕರ್ನಾಟಕ ಸಂಘ ಮತ್ತು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನವದೆಹಲಿಯಲ್ಲಿ ಏರ್ಪಡಿಸಲಾದ ಚುಟುಕು ಸಾಹಿತ್ಯ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆ ಸಂಚಾಲಕ ವೇ.ಮೂ. ಎಂ. ಜನಾರ್ದನ ಭಟ್ ವಹಿಸಿದ್ದರು.
ಡಾ. ಪುರುಷೊತ್ತಮ ಬಿಳಿಮಲೆ, ಡಾ. ವಸಂತ ಶೆಟ್ಟಿ ಬೆಳ್ಳಾರೆ, ಡಾ. ಅವನೀಂದ್ರ ನಾಥ ರಾವ್, ಸಿ.ಎಮ್ ನಾಗರಾಜ, ಜಿಲ್ಲಾ ಚುಸಾ.ಪ. ಗೌರವಾಧ್ಯಕ್ಷ ಇರಾ ನೇಮು ಪೂಜಾರಿ , ಅಧ್ಯಕ್ಷ ಚಲನಚಿತ್ರ ನಟ ತಾರನಾಥ ಬೋಳಾರ, ಕಾರ್ಯದರ್ಶಿ ಹ.ಸು. ಒಡ್ಡಂಬೆಟ್ಟು, ಉಪನ್ಯಾಸಕ ಹಿರಿಯಕವಿ ಜಯಾನಂದ ಪೆರಾಜೆ, ಪತ್ರಕರ್ತ ಕವಿ ರಾಧಾಕೃಷ್ಣ ಉಳಿಯತಡ್ಕ, ಕವಿ ಮಿತ್ರರ ವೇದಿಕೆ ಸಂಚಾಲಕ ಸುಭಾಶ್ ಪೆರ್ಲ, ಡಾ. ಎಮ್. ಜಗದೀಶ ಶೆಟ್ಟಿ ಬಿಜೈ, ಪರಿಸರ ಪ್ರೇಮಿ ಮಾಧವ ಉಳ್ಳಾಲ, ಡಾ. ರತ್ನ ಹಾಲಪ್ಪ ಗೌಡ ಉಪಸ್ಥಿತರಿದ್ದರು. ಅಂತಾರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಕರ್ನಾಟಕ, ಕೇರಳ ರಾಜ್ಯದ ೨೮ ಕವಿಗಳು ಸ್ವರಚಿತ ಕವನ ,ಚುಟುಕು ವಾಚಿಸಿದರು. ವಿಜಯಲಕ್ಷ್ಮೀ ಕಟೀಲು ನಿರೂಪಿಸಿ, ಶಾಂತಾ ಪುತ್ತೂರು ವಂದಿಸಿದರು.

ಕೃತಿ ಬಿಡುಗಡೆ :
ಡಾ|| ಅಮೃತಸಿಂಧು ಅವರ ’ನನ್ನೊಳಗಿನ ನಾನು’ ವೈದ್ಯಕೀಯ ಲೇಖನ ಸಂಗ್ರಹ ಹಾಗೂ ಸವಿ ಹೃದಯದ ಕವಿಮಿತ್ರರ ವೇದಿಕೆ ಪೆರ್ಲ ಬಳಗದ ಭಾವ ತರಂಗ ಕವನ ಸಂಕಲನವನ್ನು ಡಾ. ಪುರುಷೋತ್ತಮ ಬಿಳಿಮಲೆ, ಡಾ. ಅವನೀಂದ್ರ ರಾವ್ ಬಿಡುಗಡೆಗೊಳಿಸಿದರು. ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ 10 ಮಂದಿಯನ್ನು ಪುರಸ್ಕರಿಸಲಾಯಿತು.

More articles

Latest article