ಸುಪ್ರೀಂ ಕೋಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತರೂ ಆಗಿದ್ದ ನಂಜೇಗೌಡ ವೆಂಕಟಾಚಲ ಅವರು ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದರು. ಇವರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

2001 ರಿಂದ 2006 ರವರೆಗೆ ಕರ್ನಾಟಕ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು. ವೆಂಕಟಾಚಲ ನವರು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಎಸ್.ಎಂ.ಕೃಷ್ಣ ಮತ್ತು ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದರು.

ತಾವು ವಿಚಾರಣೆ ನಡೆಸುತ್ತಿದ್ದ ಪ್ರತಿಯೊಂದು ಪ್ರಕರಣದಲ್ಲಿಯೂ ವಿಶೇಷ ರೀತಿ ಕ್ರಮ ಕೈಗೊಳ್ಳುತ್ತಿದ್ದ ವೆಂಕಟಾಚಲ ಅವರ ಕಾರ್ಯವೈಖರಿಯೇ ವಿಭಿನ್ನವಾಗಿರುತಿತ್ತು.ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ ಇವರು ತಪಿತಸ್ಥರನ್ನು ರೆಡ್ ಹ್ಯಾಂಡ್ ಆಗಿಯೇ ಹಿಡಿದು, ಪಾಠ ಕಲಿಸುತ್ತಿದ್ದರು. ಲೋಕಾಯುಕ್ತಕ್ಕೆ ಬರುತ್ತಿದ್ದ 20-25 ಪ್ರಕರಣಗಳ ಸಂಖ್ಯೆ ಇವರ ಕಾಲದಲ್ಲಿ 200-250ಕ್ಕೆ ಹೆಚ್ಚಾದವು. ತಮ್ಮ ಅಧಿಕಾರವಧಿಯಲ್ಲಿ ರಾಜಕಾರಣಿಗಳ ಭ್ರಷ್ಟ ಪ್ರಕರಣಗಳನ್ನು ಬಯಲುಗೊಳಿಸಿದ್ದರಿಂದ ಸಹಜವಾಗಿಯೇ ಇವರು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಕನ್ನಡದಲ್ಲಿ ಲೋಕಾಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವರಲ್ಲಿ ಇವರೂ ಒಬ್ಬರು. ಕೋಲಾರದ ಮುಳಬಾಗಿಲಿನ ಮಿಟ್ಟೂರು ಗ್ರಾಮದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಬೆಂಗಳೂರಿನಲ್ಲಿ ಬಿಎಸ್ಸಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್ ಎಲ್ ಬಿ ಪದವಿ ಪಡೆದಿದ್ದರು. ಇವರ ಲೋಕಾಯುಕ್ತ ಜೀವನ ಆಧರಿಸಿ ಹಲವು ಚಲನಚಿತ್ರಗಳು ಬಿಡುಗಡೆಗೊಂಡಿವೆ.
ವಯಾಲಿಕಾವಲ್ ಮನೆಯಲ್ಲಿ ವೆಂಕಟಚಲ ಅವರ ಪಾರ್ಥಿವ ಶರೀರ ವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ, ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುತ್ರರೊಬ್ಬರು ಅಮೇರಿಕಕ್ಕೆ ತೆರಳಿದ್ದು, ಅವರು ಆಗಮಿಸಿದ ನಂತರ ಅಂತಿಮ ಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದೆಂದು ಕುಟುಂಬಸ್ಥರು ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here