ಯಾದವ ಕುಲಾಲ್
ಬಿ.ಸಿ.ರೋಡ್ : ಶನಿವಾರ ಮಾಣಿ-ಕಲ್ಲಡ್ಕ ಸಂತೆ, ಸೋಮವಾರ ಪುತ್ತೂರು-ಬೆಳ್ತಂಗಡಿಯಲ್ಲಿ ಸಂತೆ, ಮಂಗಳವಾರ ವಿಟ್ಲ, ಸಿದ್ದಕಟ್ಟೆ ಸಂತೆ, ಬುಧವಾರ ಸಾಲೆತ್ತೂರು, ನೆಲ್ಯಾಡಿ ಸಂತೆ, ಹೀಗೆ ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿ ವಾರದಲ್ಲಿ ಒಂದೊಂದು ದಿನ ಸಂತೆ ಏರ್ಪಡುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಕುಕ್ಕಾಜೆ, ಸಾಲೆತ್ತೂರು, ಮಾಣಿ, ಕಲ್ಲಡ್ಕ, ಸಿದ್ದಕಟ್ಟೆ, ವಿಟ್ಲ ಹೀಗೆ ಆರು ಪ್ರದೇಶದಲ್ಲಿ ಸಂತೆ ನಡೆಯುತ್ತದೆ. ಇದರಿಂದ ರೈತರು ಬೆಳೆಸಿದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮುಟ್ಟಿಸುವ ವೇದಿಕೆಯಾಗಿರುತ್ತದೆ. ಆದರೆ ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡು, ಬಂಟ್ವಾಳ ಈಗ ಬೆಳೆಯುತ್ತಿರುವ ನಗರವಾದರೂ ಈ ಊರನ ಸಂತೆಯನ್ನು ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವ ಭಾಗ್ಯ ಇನ್ನೂ ಲಭಿಸಿಲ್ಲ.
ಸಂತೆ ಇಲ್ಲದ ಗ್ರಾಮಗಳು : ಬಿ.ಮೂಡ ಗ್ರಾಮ, ಕಳ್ಳಿಗೆ ಗ್ರಾಮ, ತುಂಬೆ ಗ್ರಾಮ, ಪುದು ಗ್ರಾಮ, ಮೇರಮಜಲು ಗ್ರಾಮ, ಕೊಡ್ಮಾಣ್ ಗ್ರಾಮ, ಬಂಟ್ವಾಳ ಕಸ್ಬಾ, ಅಮ್ಟಾಡಿ, ಹೀಗೆ ತಾಲೂಕಿನ ಹಲವಾರು ಎಲ್ಲಾ ಪ್ರದೇಶಗಳ ಬಿ.ಸಿ.ರೋಡು, ತುಂಬೆ, ಫರಂಗಿಪೇಟೆ ಪ್ರದೇಶವು ಗ್ರಾಮೀಣ ಭಾಗದ ಕೊಂಡಿಯಾಗಿದ್ದು ಹಲವಾರು ರೈತರು ತಾವು ಬೆಳೆಸಿದ ಬೆಳೆ, ಮನೆಯಲ್ಲಿ ಮಾಡುವ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಬೇಕಾದರೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಬಡ ರೈತರಿಗೆ ಮತ್ತು ಕುಶಲಕರ್ಮಿಗಳಿಗೆ ಸಿಗುವ ಲಾಭಾಂಶವೂ ಕಡಿಮೆ. ಈಗ ಫರಂಗಿಪೇಟೆಯಿಂದ ಬಿ.ಸಿ.ರೋಡಿನ ವರೆಗೆ ಹಲವಾರು ಮನೆಗಳು ನಿರ್ಮಾಣವಾಗಿದೆ. ಫ್ಲ್ಯಾಟ್‌ಗಳು ನಿರ್ಮಾಣವಾಗಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಸಾವಿರಾರು ಜನರು ಇಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಹೀಗಿರುವಾಗ ಇಲ್ಲಿ ಯಾವುದೇ ಪ್ರದೇಶದಲ್ಲಿ ವಾರಕ್ಕೊಂದು ದಿನ ಸಂತೆಯನ್ನು ನಿರ್ಮಾಣ ಮಾಡಿದರೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿಕ್ಕಿಲ್ಲ.
ಸಂತೆಕಟ್ಟೆ ನಿರ್ಮಾಣ ಮಾಡಿದರೆ ಇಲ್ಲಿ ರೈತರು ತಾವು ಬೆಳೆದ ತರಕಾರಿಗಳನ್ನು ನೇರವಾಗಿ ಸಂತೆಕಟ್ಟೆಗೆ ತರುವುದರಿಂದ ಮತ್ತು ಬೇರೆ ಬೇರೆ ಸಾಮಾನು -ಸರಂಜಾಮುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಇಲ್ಲಿ ಬರುವುದರಿಂದ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಪಡೆಯಲು ಗ್ರಾಹಕರಿಗೆ ಸಾಧ್ಯವಾಗುತ್ತದೆ. ಅದೇ ರೀತಿ ಈ ಭಾಗದಲ್ಲಿ ಹಲವಾರು ಮದುವೆ ಸಭಾಂಗಣಗಳು ಇರುವುದರಿಂದ ನಿತ್ಯ ಸಮಾರಂಭಗಳು ನಡೆಯುತ್ತಲೇ ಇರುತ್ತದೆ. ಸಮಾರಂಭಕ್ಕೆ ಬೇಕಾಗುವ ಹೆಚ್ಚಿನ ಸಾಮಾಗ್ರಿಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯುವುದಕ್ಕೋಸ್ಕರ ಮಂಗಳೂರಿಗೆ ತೆರಳುವ ಬದಲು ತಮ್ಮ ಹತ್ತಿರದ ಊರಿನಲ್ಲಿಯೇ ಈ ರೀತಿಯ ಸಂತೆ ಮಾರುಕಟ್ಟೆ ಇದ್ದರೆ ಎಲ್ಲರಿಗೂ ಒಳಿತು.
ಬಿ.ಸಿ.ರೋಡ್ ಸೌಂದರ್ಯೀಕರಣ ಯೋಜನೆಯ ಜೊತೆ ಈ ಭಾಗದ ಜನತೆಗೆ ಅನುಕೂಲವಾಗುವಂತೆ ಸೂಕ್ತವಾದ ಸ್ಥಳವನ್ನು ಗೊತ್ತುಪಡಿಸಿ ಜನರಿಗೆ ದೈನಂದಿನ ಜೀವನಕ್ಕೆ ಬೇಕಾಗುವಂತಹ ಸಾಮಾನುಗಳು, ತರಕಾರಿಗಳು, ಮಕ್ಕಳ ಆಟಿಕೆಗಳು, ಮೀನುಮಾರುಕಟ್ಟೆ, ಹೀಗೆ ಎಲ್ಲವೂ ಒಂದೇ ಕಡೆ ದೊರಕುವಂತೆ ಮಾಡಲು ಪುರಸಭೆ ಇಲ್ಲವೇ ಜಿಲ್ಲಾಡಳಿತ ಮುಂದಾಗಬೇಕು. ಅಂಗಡಿ, ಮಾಲುಗಳಲ್ಲಿ ಕೊಂಡುಕೊಳ್ಳುವುದಕ್ಕಿಂತ, ಆನ್‌ಲೈನ್ ಶಾಪಿಂಗ್ ಮಾಡುವುದಕ್ಕಿಂತ ಹೀಗೆ ಸಂತೆ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಖುಷಿಯೇ ಬೇರೆ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾದರೆ ಈ ಊರುಗಳಲ್ಲಿ ಸಂತೆಯ ನಿರ್ಮಾಣವನ್ನು ಅಗತ್ಯವಾಗಿ ಮಾಡಬೇಕಾಗಿದೆ.
***
ಸಂತೆಕಟ್ಟೆ ನಿರ್ಮಾಣ ಮಾಡುವುದು ನನ್ನದೊಂದು ಪುಟ್ಟ ಕನಸು. ಈ ಭಾಗದಲ್ಲಿ ಸಾವಿರಾರು ಜನಸಂಖ್ಯೆ ಇದ್ದಾರೆ. ವಾರದ ಸಂತೆ ಮಾಡಿ ಜನರಿಗೆ ಎಲ್ಲಾ ಸಾಮಾನುಗಳನ್ನು ಯೋಗ್ಯ ದರದಲ್ಲಿ ನೀಡುವಂತೆ ಮಾಡುವುದು ಹಾಗೂ ರೈತರಿಂದ ನೇರ ಗ್ರಾಹಕರಿಗೆ ಮಾರಾಟ ಮಾಡುವ ಯೋಜನೆಯನ್ನು ಮುಂದಿನ ದಿನದಲ್ಲಿ ಮಾಡಲಾಗುವುದು. ತಾಲೂಕಿನಲ್ಲಿ ಸೂಕ್ತವಾದ ಸ್ಥಳವನ್ನು ಕಾದಿರಿಸಿ ಸಂತೆ ಕಟ್ಟೆ, ಮೀನು ಮಾರ್ಕೆಟ್ ಹೀಗೆ ಎಲ್ಲವೂ ಒಂದೇ ಕಡೆ ಸಿಗುವ ಹಾಗೆ ಮಾಡಲು ಪ್ರಯತ್ನ ಮಾಡುತ್ತೇನೆ.
– ರಾಜೇಶ್ ನಾಯಕ್, ಶಾಸಕರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ
*****
ಸಂತೆಯಲ್ಲಿ ಎಲ್ಲವೂ ದೊರೆಯುತ್ತದೆ. ಬಟ್ಟೆಯಂಗಡಿ, ಚಪ್ಪಲಿಯಂಗಡಿ, ತರಕಾರಿ, ಮೀನು, ಒಣಮೀನು, ಕೋಳಿ ಹೀಗೆ ಒಂದು ಮನೆಗೆ ದೈನಂದಿನ ಬಳಕೆಗೆ ಬೇಕಾಗುವಂತಹ ವಸ್ತುಗಳು ಒಂದೇ ಕಡೆ ಮಾರಾಟ ಮಾಡುವುದು. ರೈತರಿಂದ ನೇರ ಗ್ರಾಹಕರಿಗೆ ಮಾರಾಟ ಮಾಡುವುದು. ಫರಂಗಿಪೇಟೆ-ಬಿ.ಸಿ.ರೋಡಿನ ಜನತೆಯು ವರ್ಷಕ್ಕೊಮ್ಮೆ ತಮ್ಮ ಊರಿನ ಜಾತ್ರೋತ್ಸವದ ಸಂತೆ, ಇಲ್ಲವೇ ರಸ್ತೆ ಬದಿಯಲ್ಲಿ ತರಕಾರಿ ಇತರ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಸಂತೆಯನ್ನು ಮಾತ್ರ ನೋಡಿದ್ದು ಬಂಟ್ವಾಳ ತಾಲೂಕಿನಲ್ಲಿ ವಾರಕ್ಕೊಮ್ಮೆ ವ್ಯವಸ್ಥಿತವಾದ ಸಂತೆಯ ವ್ಯವಸ್ಥೆಯನ್ನು ಮಾಡಿದರೆ ಈ ಭಾಗದ ಜನತೆಗೆ ಒಳ್ಳೆಯದಾಗುತ್ತದೆ.
– ಮುಸ್ತಾಫ ಪಾಣೆಮಂಗಳೂರು
******
ನಾವು ಕುಟುಂಬ ಸಮೇತರಾಗಿ ಮಾಲ್‌ಗಳಿಗೆ ಭೇಟಿಯಾಗಿ ಅಲ್ಲಿಂದ ತಿಂಗಳಿಗೊಮ್ಮೆ ಮನೆ ಸಾಮಾಗ್ರಿಗಳನ್ನು ತೆಗೆದುಕೊಳ್ಳುತ್ತೇವೆ. ಅದೇ ನಮ್ಮೂರಿನಲ್ಲೇ ವಾರದ ಸಂತೆ ಮಾಡಿದರೆ ದೂರದ ಮಂಗಳೂರಿಗೆ ಹೋಗುವ ಪ್ರಮೇಯ ಬರುವುದಿಲ್ಲ. ಅದರ ಜೊತೆಗೆ ಈ ಭಾಗದ ರೈತರಿಗೂ ಒಂದು ಅವಕಾಶ ನೀಡಿದಂತಾಗುವುದು.
– ಹೇಮಾವತಿ, ಕೈಕಂಬ