ಅಡ್ಯನಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಟ್ಲದಲ್ಲಿ ನಡೆದ ವಿಟ್ಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಡ್ಯನಡ್ಕ ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸೀನಿಯರ್ ಮತ್ತು ಜೂನಿಯರ್ ವಿಭಾಗ ಎರಡರಲ್ಲೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
17ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಹತ್ತನೇ ತರಗತಿಯ ತನುಶ್ರೀ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತನುಶ್ರೀ 1500 ಮೀ ಓಟದಲ್ಲಿ ಪ್ರಥಮ, ನಡಿಗೆಯಲ್ಲಿ ಪ್ರಥಮ ಹಾಗೂ 3000 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತಾ ಎತ್ತರ ಜಿಗಿತದಲ್ಲಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ಕೋಲುಜಿಗಿತದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಸುತ್ತಿಗೆ ಎಸೆತದಲ್ಲಿ ಸಹನಾಕುಮಾರಿ ಪ್ರಥಮ, ಆಯಿಷತ್ ಶಮ್ನಾಝ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಆಯಿಷತ್ ತೌಸೀರಾ 3000 ಮೀ ಓಟದಲ್ಲಿ ದ್ವಿತೀಯ ಹಾಗೂ ಉದ್ದಜಿಗಿತದಲ್ಲಿ ತೃತೀಯ, ನಾಗವೇಣಿ ಗುಂಡೆಸೆತದಲ್ಲಿ ದ್ವಿತೀಯ, ಫಾತಿಮತ್ ಅಫ್ರೀನಾ ಕೋಲು ಜಿಗಿತದಲ್ಲಿ ದ್ವಿತೀಯ ಹಾಗೂ ರಿಲೇಯಲ್ಲಿ ತಂಡಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
14ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಎಂಟನೇ ತರಗತಿಯ ಪೂಜಾಶ್ರೀ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪೂಜಾಶ್ರೀ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದಜಿಗಿತ ದ್ವಿತೀಯ, ಅಡೆತಡೆ ಓಟ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಮಿತ 100 ಮೀ ಓಟ ಪ್ರಥಮ, ಉದ್ದಜಿಗಿತದಲ್ಲಿ ತೃತೀಯ ಹಾಗೂ ರಿಲೇಯಲ್ಲಿ ತಂಡಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಮುಖ್ಯ ಟಿ. ಆರ್. ನಾಯ್ಕ್ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಉದಯಕೃಷ್ಣ ಭಟ್ ತರಬೇತಿ ನೀಡಿದ್ದು, ತಂಡದ ವ್ಯವಸ್ಥಾಪಕರಾಗಿ ಸಹಶಿಕ್ಷಕಿ ಕುಸುಮಾವತಿ ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ವಿಜೇತರನ್ನು ಅಭಿನಂದಿಸಿದೆ.