ಕೇಪು ಗ್ರಾಮ ಪಂಚಾಯಿತಿಕ್ಕೊಳಪಡುವ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿ(ಎಸ್‌ಹೆಚ್೧೦೦)ಯ ದೇವುಮೂಲೆ ಎಂಬಲ್ಲಿ ಅಗಲ ಕಿರಿದಾದ ತಿರುವು ರಸ್ತೆಯ ಅನತಿ ದೂರದಲ್ಲಿರುವ ಸಾರಥಿ ಕೆರೆಗೆ ೧೫ ವರ್ಷಗಳ ಹಿಂದೆ ಖಾಸಗಿ ಬಸ್ಸು ಬಿದ್ದು, ಏಳೆಂಟು ಪ್ರಯಾಣಿಕರು ಗಾಯಗೊಂಡಿರುವ ಇತಿಹಾಸವಿದ್ದು, ಕೆರೆ ತುಂಬಾ ನೀರಿದ್ದು, ವಾಹನ ಚಾಲಕರಿಗೆ ಅಪಾಯವನ್ನು ಆಹ್ವಾನಿಸುತ್ತಿರುವ ಬಗ್ಗೆ ವರದಿಯಲ್ಲಿ ತಿಳಿಸಿತ್ತು. ಸೋಮವಾರ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಷಣ್ಮುಗಂ, ಸಹಾಯಕ ಇಂಜಿನಿಯರ್ ಪ್ರೀತಂ ಸ್ಥಳ ಪರಿಶೀಲನೆ ನಡೆಸಿದರು. ಇವರೊಂದಿಗೆ ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಮಾಹಿತಿ ನೀಡಿದರು.
ಸುಭದ್ರ ತಡೆಗೋಡೆಗೆ ೫೦ ಲಕ್ಷ ಮಂಜೂರು: ಸಾರಥಿ ಕೆರೆಯನ್ನು ಮುಚ್ಚಲೇ ಬೇಕಾದ ಅವಶ್ಯಕತೆಯಿಲ್ಲ. ಇಲ್ಲಿ ಸದೃಢವಾದ ತಡೆಗೋಡೆ ನಿರ್ಮಾಣ ಮಾಡಲು ಇಲಾಖೆ ೫೦ ಲಕ್ಷ ರೂ.ಗಳನ್ನು ಮಂಜೂರುಗೊಳಿಸಲಿದೆ. ತಕ್ಷಣ ಈ ಕಾಮಗಾರಿಗೆ ಟೆಂಡರ್ ಕರೆಯಲು ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಮಕ್ಷಮದಲ್ಲಿ ಭರವಸೆ ನೀಡಿದರು.
ಇಲ್ಲಿಗೆ ಸಮೀಪದ ದುರ್ಗಾನಗರ ಎಂಬಲ್ಲಿ ರಸ್ತೆ ಸಮೀಪದಲ್ಲಿರುವ ತೆರೆದ ಕೆರೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಈ ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ಇರುವ ಕಾರಣ ತಡೆಬೇಲಿ ನಿರ್ಮಾಣ ಅಸಾಧ್ಯವಾಗಿದೆ. ಅದಕ್ಕಾಗಿ ಸುಭದ್ರವಾದ ಚಾನೆಲ್ ರೀತಿಯ ತಡೆಬೇಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದಲ್ಲದೇ ಸಾರಡ್ಕ ಎಂಬಲ್ಲಿರುವ ಗುಂಡಿಯನ್ನು ಪರಿಶೀಲಿಸಿ ಈ ರಸ್ತೆ ವಿಸ್ತರಣೆಯಾಗುವ ಹಂತದಲ್ಲಿದ್ದು, ಸದ್ಯ ತಾತ್ಕಾಲಿಕ ತಡೆಬೇಲಿ ನಿರ್ಮಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷರಿಗೆ ಭರವಸೆ ಕೊಟ್ಟರು.