Tuesday, October 17, 2023

ವಿಟ್ಲ: ನೆರೆ ಸಂತ್ರಸ್ಥರ ನಿಧಿ ಸಂಗ್ರಹಕ್ಕೆ ದಸರಾ ಕ್ರೀಡೋತ್ಸವ

Must read

ವಿಟ್ಲ: ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವಿಟ್ಲ ವಲಯದ ಆಶ್ರಯದಲ್ಲಿ ನೆರೆ ಸಂತ್ರಸ್ತರ ಸಹಾಯನಿಧಿ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟಗಳನ್ನೂಳಗೊಂಡ ದಸರಾ ಕ್ರೀಡೋತ್ಸವ ವಿಟ್ಲದ ಸರಕಾರಿ ಶಾಲೆಯ ಮೈದಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಅವರು ಮಾನವೀಯ ಕಾರ್ಯಕ್ಕಾಗಿ ಕಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಅಶಕ್ತರಿಗೆ ಸಹಾಯ ಮಾಡುವುದೇ ನಿಜವಾದ ಸಮಾಜ ಸೇವೆಯಾಗಿದೆ. ಧ್ವನಿ ಬೆಳಕು ಸಂಘಟನೆಯ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿ ಮಾತನಾಡಿ ಸಂಘಟನೆಯಿಂದ ಮಾತ್ರ ಉತ್ತಮವಾದ ಸಾಮಾಜಿಕ ಕಾರ್ಯ ನಡೆಸಲು ಸಾಧ್ಯ. ಧ್ವನಿ ಮತ್ತು ಬೆಳಕು ಸಂಯೋಜಕರ ಕ್ರೀಡಾಕೂಟದ ಉದ್ದೇಶ ಉಳಿದ ಸಂಘಟನೆಗಳಿಗೆ ಪ್ರೇರಣೆಯಾಗಲಿ ಎಂದರು.
ಬಂಟ್ವಾಳ ತಾಲೂಕು ಬಂಟ್ವಾಳ ತಾಲ್ಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ಶೇಖ್ ಸುಭಾನ್ ಮುನ್ನ ಮಂಗಳಪದವು ಅಧ್ಯಕ್ಷತೆ ವಹಿಸಿದ್ದರು. ಮಹಡಿಯಿಂದ ಬಿದ್ದು ಮೃತಪಟ್ಟ ಉತ್ತಮ ಸಂಘಟಕ ಫಾರೂಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗೌರವ ಸಲಹೆಗಾರ ಧನ್‌ರಾಜ್ ಶೆಟ್ಟಿ, ವಿಟ್ಲ ಮೆಸ್ಕಾಂ ಕಿರಿಯ ಎಂಜಿನಿಯರ್ ಸತೀಶ್ ಸಫಲ್ಯ, ಸ್ವರ್ಣೋದ್ಯಮಿ ಸದಾಶಿವ ಆಚಾರ್ಯ, ವಿಟ್ಲ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಎಚ್, ಚಂದಳಿಕೆ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ, ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಸ್ಥಾಪಕಾಧ್ಯಕ್ಷ ರವಿವರ್ಮ ವಿಟ್ಲ, ವಿಟ್ಲ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ಯುವಕ ಮಂಡಲದ ಅಧ್ಯಕ್ಷ ಸದಾನಂದ ಸೇರಾಜೆ, ಕೋಡಪದವು ಸರಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.
ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಇಸ್ಮಾಯಿಲ್ ಏರ್‌ಸೌಂಡ್ಸ್ ಪ್ರಸ್ತಾವಿಸಿದರು. ಅಶ್ವಿನ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಕುಂಡಡ್ಕ ಸಹಕರಿಸಿದರು.

More articles

Latest article