ಬಂಟ್ವಾಳ : ಬ್ರಹ್ಮರಕೋಟ್ಲು ಸುಂಕ ವಸೂಲಾತಿ ಕೇಂದ್ರದಲ್ಲಿ ರಸ್ತೆ ಕಾಮಗಾರಿ ಹೆಸರಿನಲ್ಲಿ ಹಾಕಿದ ಕಾಂಕ್ರೀಟ್ ಕಳಪೆಯಾಗಿದ್ದು ಒಂದೇ ಮಳೆಗೆ ಸಂಪೂರ್ಣವಾಗಿ ಎದ್ದು ಹೋಗಿದ್ದು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ಧಾರೆ.

ಕೆಲವು ದಿನಗಳ ಹಿಂದೆ ಕಾರೊಂದು ಸುಂಕ ನೀಡಿ ಮುಂದೆ ಹೋದಾಕ್ಷಣ ಟೋಲ್ ಬೂತ್‌ನ ಬಳಿಯೇ ಅದರ ಹೊಂಡಕ್ಕೆ ಬಿದ್ದು ಎರಡೂ ಟಯರ್ ಪಂಚರ್ ಆದ ಘಟನೆ ನಡೆದಿದ್ದು ಈ ಕಾರನ್ನು ತಲ್ಲುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೊಂಡಕ್ಕೆ ತೇಪೆ ಹಚ್ಚುವ ಕೆಲಸ ಮಾಡುವುದನ್ನು ಬಿಟ್ಟರೆ ಶಾಶ್ವತವಾದ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವುಕ್ಕೆ ಮುಂದಾಗಿಲ್ಲ.
ವರದಿ ಬಿತ್ತರವಾದ ಕೂಡಲೇ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದೇ ವಾಹನ ಸವಾರರನ್ನು ಮತ್ತೆ ರೊಚ್ಚಿಗೆಬ್ಬಿಸಿದೆ.
ಕಳೆದ ಕೆಲ ದಿನಗಳ ಹಿಂದೆ ರಸ್ತೆತಡೆ ಮಾಡಿ ಟೋಲ್ ಗೇಟ್ ನಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಸಿತ್ತು. ಆದರೆ ಕಾಂಕ್ರೀಟ್ ಕಾಮಗಾರಿ ನಡೆಸಿದ ನಾಲ್ಕೇ ದಿನದಲ್ಲಿ ಕಾಂಕ್ರೀಟ್ ಎದ್ದು ಹೋಗಿ ಸಂಚಾರಕ್ಕೆ ಅನಾನುಕೂಲ ಪರಿಸ್ಥಿತಿ ಉಂಟಾಗುತ್ತಿದೆ ಎಂದು ವಾಹನ ಸವಾರರು ದೂರುತ್ತಿದ್ದಾರೆ.

ಇಲ್ಲಿನ ಸ್ಥಿತಿ ಹೇಗಿದೆ ಗೊತ್ತಾ?
ಹದಗೆಟ್ಟ ರಸ್ತೆಗಳು, ತಕ್ಕು ಹಿಡಿಯುತ್ತಿರುವ ಬೂತ್-ತಗಡು ಶೀಟ್‌ಗಳು, ಎಲ್ಲೆಂದರಲ್ಲಿ ಬಿದ್ದಿರುವ ಬ್ಯಾರಿಕೇಡ್‌ಗಳು-ಕೋನ್‌ಗಳು, ಹಾಳಾಗಿರುವ ಹಾಗೂ ನೆಲನೋಡುತ್ತಿರುವ ಸಿಸಿ ಕ್ಯಾಮೆರಾಗಳು, ಉರಿಯದ ಸ್ಟ್ರೀಟ್ ಲೈಟ್‌ಗಳು, ಮುರಿದು ಬಿದ್ದಿರುವ ಸಂಚಾರ ನಾಮಫಲಕಗಳು, ಟೋಲ್ ಸಿಬ್ಬಂಗಳ ಗೂಂಡಾಗಿರಿ. ಇವುಗಳು ಬ್ರಹ್ಮರಕೂಟ್ಲು ಟೋಲ್ ಬೂತ್‌ನಲ್ಲಿ ಕಂಡು ಬರುತ್ತಿರುವ ಜ್ವಲಂತ ದೃಶ್ಯಗಳಾಗಿವೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಝವು ಅವೈಜ್ಞಾನಿಕವಾಗಿ ಕೂಡಿದ್ದು, ಮಳೆಗಾಲಕ್ಕೆ ರಸ್ತೆಗಳು ಸಹಿತ ಟೋಲ್‌ಬೂತ್ ವ್ಯಾಪ್ತಿಯ ಮೂಲಸೌಕರ್ಯಗಳು ಮತ್ತಷ್ಟು ಹದಗೆಟ್ಟು ಹೋಗಿದೆ. ಸುಂಕ ಕಟ್ಟಿ ಜೇಬಿಗೆ ನಷ್ಟ ಮಾಡಿಕೊಂಡದ್ದಲ್ಲದೇ, ವಾಹನಗಳ ದುರಸ್ತಿಗೆ ಮತ್ತಷ್ಟು ಹಣ ಕಟ್ಟಬೇಕಾದ ಅನಿವಾರ್ಯತೆ ವಾಹನ ಸವಾರರಿಗೆ ಎದುರಾಗಿದೆ. ಬರೀ ಸುಂಕ ಕಟ್ಟಿದರೆ ಸಾಕೇ?ರಸ್ತೆ ಬೇಡವೇ? ಎಂದು ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ.
ಕೇವಲ ಹಣ ಸಂಗ್ರಹಕ್ಕೆ ಸೀಮಿತವಾಗಿರುವ ಟೋಲ್ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಏನೂ ಭದ್ರತೆಯನ್ನು ಮಾಡುವ ಗೋಜಿಗೇ ಹೋಗಿಲ್ಲ. ವ್ಯವಸ್ಥಿತವಾದ ಚರಂಡಿ ವ್ಯವಸ್ಥೆ ಇಲ್ಲ. ಕಾಂಕ್ರೀಟ್ ರಸ್ತೆ ಕಿತ್ತು ಹೋಗಿದೆ. ಹೈಮಾಸ್ಕ್ ದೀಪ ಹಾಗೂ ದಾರಿ ದೀಪವೂ ಉರಿಯುತ್ತಿಲ್ಲ. ಟೋಲ್ ಶುಲ್ಕ ದರ ಬಿಟ್ಟರೆ, ಸಂಚಾರ ನಾಮಫಲಕಗಳು ನಾಪತ್ತೆಯಾಗಿವೆ. ೨೪ ಗಂಟೆಯೂ ತೆರೆಬೇಕಾಗಿರುವ ನಂದಿನಿ ಹಾಲು ಒಕ್ಕೂಟದ ಕ್ಯಾಂಟೀನ್ ಇನ್ನೂ ಆರಂಭವಾಗಿಲ್ಲ. ಹೀಗೆ ಜನರಿಂದ ವಸೂಲಿ ಮಾಡುವುದರಲ್ಲಿ ಕಡಿಮೆ ಇಲ್ಲದ ಇಲಾಖೆ ಜನರಿಗೆ ಕೊಡಬೇಕಾದ ಸವಲತ್ತು ನೀಡುವುದರಲ್ಲಿ ಮೀನಮೇಷ ಹಾಕುತ್ತಿವೆ.
ಹೆದ್ದಾರಿಯಲ್ಲಿ ಗಣ್ಯ ವ್ಯಕ್ತಿಗಳು, ಉನ್ನತ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ದಿನನಿತ್ಯ ಉಚಿತವಾಗಿ ಸಂಚರಿಸುವುದರಿಂದ ಅವರಿಗೆ ಇದರ ಸಮಸ್ಯೆ ಗೊತ್ತಾಗುವುದಿಲ್ಲ. ಸುಂಕ ನೀಡಿದವರಿಗೆ ಮಾತ್ರ ಇಲ್ಲಿನ ರಸ್ತೆ ದುರಾವಸ್ಥೆಯ ಸಮಸ್ಯೆಗಳು ಗೋಚರಿಸುತ್ತದೆ. ಆದ್ದರಿಂದ ಶ್ರದ್ಧೆಯಿಂದ ನೀಡುವ ಸುಂಕದ ಹಣಕ್ಕೆ, ರಸ್ತೆಯ ಅವ್ಯವಸ್ಥೆಯಿಂದ ಲಕ್ಷಗಟ್ಟಲೆ ಕೊಟ್ಟು ಖರೀದಿಸಿದ ವಾಹನಗಳ ದುಸ್ಥಿತಿಗೆ ಯಾವ ಇಲಾಖೆಯೂ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸವಾರರು ದೂರುತ್ತಿದ್ದಾರೆ.
ತುರ್ತು ರಸ್ತೆಯೂ ಇಲ್ಲ:
ಸುಂಕ ವಸೂಲಿ ಮಾಡುವಾಗ ಹೆದ್ದಾರಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಆಂಬುಲೆನ್ಸ್ ಸಹಿತ ತುರ್ತು ವಾಹನಗಳ ಸಂಚಾರಕ್ಕೆ ರಸ್ತೆಯೂ ಇಲ್ಲ. ಟೋಲ್ ರಸ್ತೆ ವಾಹನಗಳು ಬೇಕಾಬಿಟ್ಟಿ ಸಂಚಾರಸುತ್ತಿದ್ದು, ಇದರಿಂದ ಸವಾರರಿಗೆ ಗಲಿಬಿಲಿಯಾಗುವ ಸಂಭವವೆ ಹೆಚ್ಚು ಎಂದು ದೂರುತ್ತಾರೆ ವಾಹನ ಸವಾರರು.

ತಗಡಿನ ಬೂತ್:
ಟೋಲ್ ಬೂತ್‌ಗೂ ಸರಿಯಾದ ಭದ್ರತೆ ಇಲ್ಲ. ಕಂಪ್ಯೂಟರ್ ಕೇಂದ್ರವೇ ದುರವಸ್ಥೆಯಿಂದ ಕೂಡಿದೆ. ಟೋಲ್ ಬೂತ್ ದುರಾವಸ್ಥೆಯಲ್ಲಿದ್ದರೂ ವಸೂಲಿ ಮಾತ್ರ ಕ್ರಮಬದ್ಧವಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ವಾಹನ ದಟ್ಟಣೆಯನ್ನು ತಪ್ಪಿಸಲು ಹಾಗೂ ತುರ್ತು ವಾಹನಗಳು ಸಂಚರಿಸಲು ಹೊಸ ರಸ್ತೆ ಹಾಗೂ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ವರ್ಷ ಕಳೆಯಿತು. ಹೀಗೆ ಹಲವಾರು ವರ್ಷಗಳಿಂದ ವಾಹನ ಸವಾರರಿಂದ ಸುಂಕ ಪಡೆದುಕೊಂಡರೂ ವಾಹನ ಸವಾರರಿಗೆ ಸವಲತ್ತು ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here