ಬಂಟ್ವಾಳ: ಕೇಂದ್ರ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ರದ್ದುಗೊಳಿಸಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರುವಂತೆ ಆಗ್ರಹಿಸಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರದ ವತಿಯಿಂದ ಬಿ.ಸಿ.ರೋಡಿನ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ಧರಣಿ ನಡೆಯಿತು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಧರಣಿನಿರತರನ್ನುದ್ದೇಶಿಸಿ ಮಾತನಾಡಿ, ದೇಶದಾದ್ಯಂತ ಆರ್ಥಿಕ ಹಿಂಜರಿತದಿಂದಾಗಿ ಉತ್ಪದನಾ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗೆ ಬಾರೀ ದಂಡ ವಿಧಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಈ ಕಾಯಿದೆಯನ್ನು ಎಸ್ಡಿಪಿಐ ಖಂಡಿಸುತ್ತದೆ ಎಂದು ಹೇಳಿದರು.

ಪ್ರತಿ 1.5ಲಕ್ಷ ಜನರು ರಸ್ತೆ ಅಪಘಾತದಿಂದ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಕೇವಲ ಸಂಚಾರ ನಿಯಮ ಉಲ್ಲಂಘನೆಯಲ್ಲ ಎಂದ ಅವರು, ದೇಶದ ಶೇ. 80ರಷ್ಟು ರಸ್ತೆಗಳು ಅವೈಜ್ಞಾನಿಕದಿಂದ ಕೂಡಿದ್ದು, ಇನ್ನು ಕೆಲವು ರಸ್ತೆಗಳು ಕಳಪೆ ಹಾಗೂ ಅಪೂರ್ಣವಾಗಿದೆ. ಇದರಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತದೆ ಎಂದು ಹೇಳಿದರು.
ಕಾನೂನು ಹಾಗೂ ಭಾಷಾ ಪ್ರಜ್ಞೆಯಿಲ್ಲ ಜಿಲ್ಲೆಯ ಸಂಸದರು ರಸ್ತೆ ದುರಸ್ಥಿಗೊಳಿಸುವ ಹಾಗೂ ತೇಪೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡದಿರುವುದು ಖೇದಕರ ಎಂದ ಅವರು, ಎನ್‌ಆರ್‌ಸಿ, ಕಾಶ್ಮೀರದ 370ನೇ ವಿಧಿ, ನೆರೆ ಪರಿಹಾರ, ರಾಜ್ಯ ಸರಕಾರದ ನಿಷ್ಕ್ರೀಯತೆ ಕುರಿತು ಮಾತನಾಡಿದರು.
ಎಸ್ಡಿಪಿಐ ವಿಟ್ಲ ಸಮಿತಿ ಅಧ್ಯಕ್ಷ ಮುಹಮ್ಮದ್ ಕಡಂಬು ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ರಸ್ತೆಯನ್ನು ದುರಸ್ಥಿಗೊಳಿಸುವುದರ ಜೊತೆಗೆ ಉನ್ನತೀಕರಿಸಬೇಕೆಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ ನೆರೆ ಪ್ರವಾಹದಿಂದ ಸಂಕಷ್ಟಗಳನ್ನು ಅನುಭವಿಸುತ್ತಿರುವ ಕುಟುಂಬಗಳಿಗೆ ಕೂಡಲೇ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದರು.
ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಧರಣಿಯಲ್ಲಿ ಎಸ್ಡಿಟಿಯು ದ.ಕ. ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ, ಎಸ್ಡಿಪಿಐ ಉಪಾಧ್ಯಕ್ಷ ಖಲಂದರ್ ಪರ್ತಿಪಾಡಿ, ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ. ಪ್ರಮುಖರಾದ ಶಾಕೀರ್ ಅಳಕೆ ಮಜಲು ಹಾಜರಿದ್ದರು. ಬಳಿಕ ಮನವಿಯನ್ನು ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಯಿತು.
ಎಸ್ಡಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಳಕೆ ಸ್ವಾಗತಿಸಿ, ನಿರೂಪಿಸಿದರು. ಖಂದರ್ ವಿಟ್ಲ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here