ರಮೇಶ್.ಕೆ.ಪುಣಚ, ವಿಟ್ಲ

ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ (ಎಸ್‌ಹೆಚ್-100) ಕಾಮಗಾರಿ
ಬಹುತೇಕ ಪೂರ್ಣಗೊಂಡಿದ್ದು, ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನಿರಂತರ ಹತ್ತಾರು ಖಾಸಗಿ ಬಸ್ಸು, ಕೆಲವು ಕೆಎಸ್‌ಆರ್‌ಟಿಸಿ ಬಸ್ಸು ಸಹಿತ ನೂರಾರು ಘನವಾಹನಗಳು, ಕಾರು, ಜೀಪು, ಅಟೋರಿಕ್ಷಾ, ಇತರೇ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ರಾಜ್ಯ ಹೆದ್ದಾರಿ ೧೨ ಮೀಟರ್ ವಿಸ್ತಾರವಿದ್ದು, ಕೆಲವು ಸ್ಥಳಗಳಲ್ಲಿ ಮಾತ್ರ ರಸ್ತೆ ಕಿರಿದಾಗಿದೆ. ಈ ಮಧ್ಯೆ ಕೇಪು ಗ್ರಾಮದ ದೇವುಮೂಲೆ ತಿರುವಿನ ಪಕ್ಕದಲ್ಲಿ ರಸ್ತೆಯೂ ಕಿರಿದಾಗಿದ್ದು, ರಸ್ತೆ ಬದಿಯ ತೋಟದ ಕೆರೆಯೊಂದು ನೀರು ತುಂಟಿಟ್ಟುಕೊಂಡು ಬಾಯ್ಬಿಟ್ಟು ನಿಂತಿದೆ. ಇಲ್ಲಿಂದ ಸ್ವಲ್ಪ ಮುಂದಕ್ಕೆ ದುರ್ಗಾ ನಗರದಲ್ಲಿಯೂ ಕೆರೆಯೊಂದು ರಸ್ತೆ ಪಕ್ಕದಲ್ಲಿದ್ದೂ, ಅಪಾಯದ ಘಂಟೆ ಬಾರಿಸುತ್ತಿದೆ.

ತಿರುವು ಪಕ್ಕದಲ್ಲೇ ’ಸಾರಥಿ’ ಕೆರೆ: ಏನಿದು.. ಸಾರಥಿ ಕೆರೆ..! ಸುಮಾರು ಹದಿನೈದು ವರ್ಷಗಳ ಹಿಂದಿನ ಘಟನೆಯಿಂದ ಕೆರೆಗೆ ಈ ಹೆಸರು ಬಂದಿದೆ. ’ಸಾರಥಿ’ ಎಂಬ ಹೆಸರಿನ ಖಾಸಗಿ ಬಸ್ಸೊಂದು ಕೆರೆಗೆ ಬಿದ್ದ ಬಳಿಕ ಈ ಅಡ್ಡ ಹೆಸರು ಹುಟ್ಟಿಕೊಂಡಿದೆ. ಅದೃಷ್ಟವಶಾತ್, ನೀರು ಕಡಿಮೆಯಿದ್ದ ಸಮಯದಲ್ಲಿ ಘಟನೆ ಸಂಭವಿಸಿದ ಕಾರಣ ಆ ಘಟನೆಯಲ್ಲಿ ಏಳೆಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರಷ್ಟೇ. ಖಾಸಗಿ ವ್ಯಕ್ತಿಯೊಬ್ಬರ ತೋಟದ ಕೆರೆ ಆಗಿದ್ದ ಕಾರಣ ಕೆರೆಯನ್ನು ಮುಚ್ಚಿಸುವ ಪ್ರಯತ್ನ ಆ ಸಂದರ್ಭದಲ್ಲಿ ನಡೆಯಲಿಲ್ಲ. ಇದೀಗ ರಸ್ತೆ ವಿಸ್ತರಣೆಯಾದ ಕಾರಣ ಕೆರೆ ರಸ್ತೆಗೆ ಇನ್ನೂ ಹತ್ತಿರವಾಗಿರುವುದು ಅಪಾಯವನ್ನು ಆಹ್ವಾನಿಸುತ್ತಿದೆ.

ಬೇಲಿಗಿಡಗಳಿಂದ ಆವೃತವಾಗಿರುವ ಕೆರೆ: ಸಾರಥಿ ಕೆರೆ ಈಗ ಸಲೀಸಾಗಿ ನೋಡಲು ಸಾಧ್ಯವಾಗದು. ಉದ್ದವಾಗಿ ಮತ್ತೊಂದು ಕಡೆ ವಿಸ್ತಾರವಾಗಿ ಚಾಚಿಕೊಂಡಿರುವ ಕೆರೆಯನ್ನು ಬೇಲಿ ಗಿಡಗಂಟಿಗಳು ಆವರಿಸಿರುವುದರಿಂದ ಕೆರೆ ಒಂದೇ ಸಲ ಸಲೀಸಾಗಿ ಕಾಣುವುದಿಲ್ಲ. ಇದುವೇ ಕಾರಣದಿಂದ ಈ ಅಪಾಯಕರ ಕೆರೆಯ ಬಗ್ಗೆ ಯಾರೂ ಸಹ ಹೆಚ್ಚಾಗಿ ಗಮನ ಹರಿಸಿಲ್ಲ. ಅದೂ ಇನ್ನೂ ಅಪಾಯವೆನಿಸಿದೆ. ಈ ಹೆದ್ದಾರಿಯಲ್ಲಿ ದಿನಕ್ಕೆ ನೂರಾರು ಕರಿಕಲ್ಲು, ಕೆಂಪು ಕಲ್ಲು, ಕ್ರಷರ್ ಹುಡಿ ಹೇರಿಕೊಂಡು ಹೋಗುವ ಲಾರಿಗಳಿದ್ದು, ಚಾಲಕರು ಅತೀ ವೇಗವಾಗಿ ಈ ಸ್ಥಳದಲ್ಲಿ ಸಾಗಿದರೆ, ಅಗಲ ಕಿರಿದಾದ ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಸಾಧ್ಯವಾಗದು. ಸ್ವಲ್ಪ ಏಮಾರಿದರೂ ಕೆರೆಗೆ ವಾಹನ ಆಹುತಿಯಾಗಬಹುದು..! ಪ್ರತೀವರ್ಷದ ಮಳೆಗಾಲದಲ್ಲಿ ಕೆರೆಯ ಬದಿಯ ಮಣ್ಣು ಕರಗುತ್ತಿದ್ದು, ಕೆರೆ ಇನ್ನೂ ವಿಸ್ತಾರವಾಗುತ್ತಿದೆ. ಹೀಗೆ ಮುಂದುವರಿದರೆ ಒಂದು ದಿನ ರಸ್ತೆಯನ್ನೇ ಕೆರೆ ನುಂಗಿ ಬಿಡಬಹುದಾದ ಅಪಾಯವೂ ಇದೆ. ಲೋಕೋಪಯೋಗಿ ಇಲಾಖೆ ತತ್‌ಕ್ಷಣ ಎಚ್ಚೆತ್ತುಕೊಂಡು ಸಾರಥಿಕೆರೆಯನ್ನು ಸಂಪೂರ್ಣವಾಗಿ ಮುಚ್ಚಿಸಿ, ಸಮೀಪದ ತಿರುವನ್ನು ವಿಸ್ತರಿಸಬೇಕಾಗಿದೆ. ಈ ತಿರುವಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಮೋರಿಯನ್ನು ತೆರವುಗೊಳಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ.

ದುರ್ಗಾನಗರದ ಕೆರೆಗೆ ತಡೆಗೋಡೆ ಅವಶ್ಯಕ: ಸಾರಥಿ ಕೆರೆಯಿಂದ ಅರ್ಧ ಕಿ.ಮೀ ಮುಂದಕ್ಕೆ ಸಿಗುವ ದುರ್ಗಾನಗರ ಎಂಬಲ್ಲಿಯೂ ರಸ್ತೆ ಬದಿಯಲ್ಲಿ ಇನ್ನೊಂದು ತೆರೆದ ಕೆರೆಯಿದೆ. ನೇರ ರಸ್ತೆಯ ಪಕ್ಕದಲ್ಲಿ ಕೆರೆಯಿದ್ದು, ಕೆರೆ ದೂರದಿಂದಲೇ ಕಾಣುತ್ತಿದೆ. ಇಲ್ಲಿ ಈಗಾಗಲೇ ಅಪಾಯದ ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ ಈ ಕೆರೆಯೂ ಸಹ ವರ್ಷ ಹೋದಂತೆ ಕುಸಿಯುತ್ತಿದ್ದು, ರಸ್ತೆ ವಿಸ್ತಾರವಿರುವ ಈ ಸ್ಥಳದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸ್ಥಳವಕಾಶವಿದೆ. ಇಲಾಖಾ ವತಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಇಲ್ಲಿ ಮಾಡಿಕೊಡಬೇಕಾಗಿದೆ.
ಕಿರಿದಾದ ತಿರುವು: ರಾಜ್ಯ ಹೆದ್ದಾರಿ ವಿಸ್ತಾರವಾಗಿದ್ದರೂ ದೇವುಮೂಲೆ ಎಂಬಲ್ಲಿ ಮಾತ್ರ ರಸ್ತೆ ಅತ್ಯಂತ ಕಿರಿದಾಗಿದೆ. ಅಪಾಯವೆನಿಸುವಂತಹ ತಿರುವು ಇದಾಗಿದ್ದು, ಇದೇ ತಿರುವು ಸ್ಥಳದ ಪಕ್ಕದಲ್ಲೇ ಈ ತೆರೆದ ತೋಟದ ಕೆರೆ ಅಂದರೆ ಸಾರಥಿ ಕೆರೆ ಇರುವುದು ಇನ್ನೂ ಅಪಾಯಕರವಾಗಿದೆ. ಕಿರಿದಾದ ರಸ್ತೆಯ ಇಕ್ಕೆಲೆಗಳಲ್ಲಿ ಮೋರಿ ನಿರ್ಮಿಸಿರುವದರಿಂದ ರಸ್ತೆ ಇನ್ನೂ ಕಿರಿದಾಗಿ, ಎರಡು ವಾಹನಗಳು ಒಂದೇ ಸಲ ಹೋಗುವಷ್ಟು ಸ್ಥಳವಿಲ್ಲದಾಗಿದೆ.
ರಾಜ್ಯ ಹೆದ್ದಾರಿ 100 ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು, ರಸ್ತೆಯ ಪಕ್ಕದಲ್ಲಿರುವ ಅಪಾಯಕರ ತೆರೆದ ಕೆರೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಇತ್ತೀಚೆಗೆ ಕೌಡಿಚ್ಚಾರ್ ಸಮೀಪದ ಕೆರೆಗೆ ಕಾರು ಬಿದ್ದು ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆಯನ್ನು ನೆನೆಸುವಾಗ ಅತೀವ ವೇದನೆಯಾಗುತ್ತಿದೆ. ಇಂತಹ ಘಟನೆಗೆ ನೇರವಾಗಿ ಯಾರೂ ಕಾರಣವಲ್ಲವಾದರೂ, ಇಂತಹ ಅವಘಡಗಳನ್ನು ಮುಂಜಾಗ್ರತಾಕ್ರಮ ತೆಗೆದುಕೊಳ್ಳುತ್ತಿದ್ದರೆ ತಪ್ಪಿಸಬಹುದಿತ್ತು ಎಂಬುದು ಜನಾಭಿಮತವಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತಾಗಲು ಅಪಾಯವೆನಿಸುವಂತಹ ಕೆರೆ, ಬಾವಿ, ಗುಂಡಿಗಳನ್ನು ಮುಚ್ಚಿಸುವ ಕ್ರಮ ಇಲಾಖೆ ಮಾಡಬೇಕಾಗಿದೆ.

ಅಪಾಯಕರ ಸಾರಥಿ ಕೆರೆಯ ಬಗ್ಗೆ ಖಂಡಿತಾ ತಿಳಿದುಕೊಂಡು, ತಕ್ಷಣ ಬೇಕಾದ ಕ್ರಮ ಕೈಗೊಳ್ಳು ಕಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೂಡಲೇ ಸ್ಥಳ ಪರಿಶೀಲನೆಗೆ ವ್ಯವಸ್ಥೆ ಮಾಡಿಸುತ್ತೇನೆ. ಅದಲ್ಲದೇ ಇದೇ ರಾಜ್ಯ ಹೆದ್ದಾರಿಯಲ್ಲಿ ಇಂತಹ ಅಪಾಯಕಾರಿ ಸ್ಥಳಗಳ ಬಗ್ಗೆಯೂ ಸರ್ವೆ ಮಾಡಿಸುತ್ತೇನೆ.
– ಷಣ್ಮುಗಂ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ
ಲೋಕೊಪಯೋಗಿ ಇಲಾಖೆ

ಸಾರಥಿ ಕೆರೆ ರಸ್ತೆ ಸಮೀಪದಲ್ಲಿಯೇ ಇರುವುದು ಸ್ಥಳೀಯ ಚಾಲಕರಿಗೆ ತಿಳಿದಿದೆ. ಆದರೆ ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ದಿನಕ್ಕೆ ನೂರಾರು ವಾಹನಗಳು ಸಂಚರಿಸುತ್ತಿವೆ. ಶಾಲಾ ಮಕ್ಕಳ ಹತ್ತಾರು ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಕಳೆಗಿಡಗಳಿಂದ ಸುತ್ತುವರಿದಿರುವ ಕೆರೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಇಲಾಖೆ ತಕ್ಷಣ ಈ ಕೆರೆಯನ್ನು ಮುಚ್ಚಿಸಿದರೆ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು.

ಗುರುವಪ್ಪ ಪೂಜಾರಿ ದಲ್ಕಜೆಗುತ್ತು, ನಿತ್ಯ ಸಂಚಾರಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here