ಬಂಟ್ವಾಳ: ದ.ಕ.ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಮೋಟರ್ ವಾಹನ ಕಾಯಿದೆ ನೆಪದಲ್ಲಿ ಚಾಲಕರಿಗೆ ದಂಡ ವಿಧಿಸುವ ವಿರುದ್ಧ ದ.ಕ. ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘ ಇದರ ಬಂಟ್ವಾಳ ಘಟಕದ ವತಿಯಿಂದ ಶನಿವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ದ.ಕ. ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘ ಇದರ ಬಂಟ್ವಾಳ ಘಟಕದ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ದ.ಕ. ಜಿಲ್ಲೆಯಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸರಕಾರವು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ. ರೂ. ಖರ್ಚು ಮಾಡುತ್ತಿದೆ. ರಸ್ತೆ ಕಾಮಗಾರಿಯನ್ನು ಯೋಗ್ಯ ಗುತ್ತಿಗೆದಾರರಿಗೆ ನೀಡದೆ ಸ್ವ-ಹಿತಕ್ಕಾಗಿ ತಮಗೆ ಅನುಕೂಲವಾಗುವ ಗುತ್ತಿಗೆದಾರರಿಗೆ ನೀಡಿ ಜನರ ತೆರಿಗೆಯ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದರು.
ಹೆದ್ದಾರಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಾಗ ಇರುವ ಕಾಳಜಿ, ರಸ್ತೆ ನಿರ್ಮಾಣಗೊಂಡ ನಂತರ ಕಾಮಗಾರಿಯನ್ನು ಪರಿಶೀಲನೆ ಮಾಡುವುದಿಲ್ಲ. ರಸ್ತೆ ಕಾಮಗಾರಿಯು ಎಪ್ರಿಲ್, ಮೇ ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ನಂತರ ಜೂನ್ ತಿಂಗಳ ಮಳೆಯಲ್ಲಿ ರಸ್ತೆಯು ಪೂರ್ಣ ಕೆಟ್ಟುಹೋಗುತ್ತದೆ. ಆದ್ದರಿಂದ ಈ ಕಳಪೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿ ಅವರು ಕೂಡಲೇ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ರೊಡ್ರಿಗಸ್ ಪರ್ಲ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರತಿ ವರ್ಷ ನೂರಾರು ಕೋಟಿ ರೂ. ಹಣ ಖರ್ಚಾಗುತ್ತದೆ. ಆದರೆ, ರಸ್ತೆಯ ಬಾಳ್ವಿಕೆಯು ಮಾತ್ರ ಬರೇ ಒಂದು ತಿಂಗಳು ಎಂದು ದೂರಿದರು.
ವಾಹನಗಳನ್ನು ಇನ್ಸೂರೆನ್ಸ್ ಇಲ್ಲದೆ ಓಡಿಸುವುದು, ಲೈಸನ್ಸ್ ಹೊಂದಿರದೆ ಚಾಲನೆ ಮಾಡುವುದು, ಅಮಲು ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸುತ್ತಿರುವವರ ಮೇಲೆ ಮೋಟರ್ ವಾಹನ ಕಾಯಿದೆಯಂತೆ ಕಾನೂನು ಕ್ರಮಗಳನ್ನು ಇಲಾಖೆಯು ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸಣ್ಣ, ಪುಟ್ಟ ತಪ್ಪುಗಳಿಗೆ ಸಾವಿರಾರು ರೂ.ದಂಡ ವಿಧಿಸುವುದನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘದ ಸಂಚಾಲಕ ಕೃಷ್ಣ ಅಲ್ಲಿಪಾದೆ, ಪ್ರತಿಭಟನೆಯ ಬಳಿಕ ಬಂಟ್ವಾಳ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸೆ. 25ರಂದು ಮಂಗಳೂರಿನಲ್ಲಿ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹಾಗೂ ಮೋಟರ್ ವಾಹನ ಕಾಯಿದೆ ವಿರುದ್ಧ ಸಮಾನ ಮನಸ್ಕ ಚಾಲಕರ ಹಾಗೂ ಸಾರ್ವಜನಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸೆ. 25ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬಿ.ಎಂ.ಪ್ರಭಾಕರ ದೈವಗುಡ್ಡೆ, ಬಂಟ್ವಾಳ ಘಟಕದ ಅಧ್ಯಕ್ಷ