ವಿಟ್ಲ: ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಪೇಟೆಯೆಲ್ಲೆಡೆ ಪ್ಲಾಸ್ಟಿಕ್ ಸಿಗುತ್ತದೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವಿಟ್ಲ ನಾಲ್ಕು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಹಾಕಿರುವ ಬ್ಯಾನರನ್ನು ತೆರವುಗೊಳಿಸುತ್ತಿಲ್ಲ. ಬ್ಯಾನರ್‌ಗಳಿಗೆ ನಿರ್ದಿಷ್ಟ ಅವಧಿಯನ್ನು ನೀಡಿದ ಬಳಿಕ ತೆರವುಗೊಳಿಸಬೇಕು. ಅದು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಡೆಗೂ ಒಂದೇ ರೀತಿ ಅನ್ವಯವಾಗಬೇಕು ಎಂದು ಪ.ಪಂ.ಸದಸ್ಯ ರವಿಪ್ರಕಾಶ್ ಮತ್ತು ಮಂಜುನಾಥ ಕಲ್ಲಕಟ್ಟ ಆಕ್ಷೇಪಿಸಿದರು.
ಅವರು ಸೋಮವಾರ ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ದಮಯಂತಿ ವಹಿಸಿದ್ದರು.
ಸದಸ್ಯರ ಮೇಲಿನ ಮಾತಿಗೆ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ಹಾಗೂ ಇತರ ಸದಸ್ಯರೂ ಸಹ ಸಹಮತ ವ್ಯಕ್ತಪಡಿಸಿದರು. ಪ.ಪಂ. ಮುಖ್ಯಾಧಿಕಾರಿ ಮಾಲಿನಿ ಅವರು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ಲಾಸ್ಟಿಕ್ ಅತೀ ಹೆಚ್ಚು ಸಂಗ್ರಹಿಸಿ ನೀಡುವವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.
ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಪುರಸಭೆ ನಿಧಿಯಲ್ಲಿ ಕೊರತೆ ಕಾಣುವಂತಾಗಬಾರದು. ಕಾಮಗಾರಿಗಳನ್ನು ನಿಗದಿತ ವೆಚ್ಚವನ್ನು ಮೀರಿ ಮಾಡುವಂತಾಗಬಾರದು. ನಿವೇಶನರಹಿತರಿಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವವರಿಗೆ ನಿವೇಶನ ನೀಡುವ ಬಗ್ಗೆ ಕ್ರಮಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಸದಸ್ಯ ರಾಮದಾಸ ಶೆಣೈ ಮತ್ತು ಶ್ರೀಕೃಷ್ಣ ವಿಟ್ಲ ಅವರು ಮಾತನಾಡಿ, ಪ.ಪಂ. ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ಮಾರ್ಗದಲ್ಲಿ ಕಸ, ಪ್ಲಾಸ್ಟಿಕ್ ರಾಶಿಯಿದೆ. ವಿಟ್ಲ ಪೇಟೆಯ ಚರಂಡಿಗಳು ಸಮರ್ಪಕವಾಗಿಲ್ಲ. ಗಬ್ಬುನಾತ ಬೀರುತ್ತಿದೆ. ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡುವಂತಾಗಬಾರದು ಎಂದರು.
ಸದಸ್ಯ ಲೋಕನಾಥ ಶೆಟ್ಟಿ ಕೊಲ್ಯ ಅವರು ಮಾತನಾಡಿ, ಕಲ್ಲಕಟ್ಟ ಸೇತುವೆಯ ಬಳಿ ಕಸ ಹಾಕಲಾಗುತ್ತಿದೆ. ಲಾರಿಯಲ್ಲಿ ಮಣ್ಣು ಕೂಡಾ ತಂದು ಸುರಿಯಲಾಗುತ್ತದೆ. ಅದರ ಬಗ್ಗೆ ವಿಚಾರಿಸಿದರೆ ಪಂಚಾಯಿತಿ ಸಿಬ್ಬಂದಿ ಸೂಚಿಸಿದ ಜಾಗದಲ್ಲೇ ಸುರಿಯುತ್ತಿದ್ದೇವೆ ಎಂದು ಉತ್ತಿರಿಸುತ್ತಾರೆ. ಪಂಚಾಯಿತಿ ಸಿಬ್ಬಂದಿ ಇದನ್ನೆಲ್ಲ ನಿಭಾಯಿಸುವ ಅಧಿಕಾರ ಹೊಂದಿದ್ದಾರೆಯೇ,,ಹಾಗಾದರೆ ಸದಸ್ಯರಿಗೇನು ಕೆಲಸ ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ, ಸದಸ್ಯರಾದ ರಾಮದಾಸ ಶೆಣೈ, ಚಂದ್ರಕಾಂತಿ ಶೆಟ್ಟಿ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ಗೀತಾ ಪುರಂದರ, ಲತಾ ಅಶೋಕ್, ಸಂಧ್ಯಾ ಮೋಹನ್, ಇಂದಿರಾ ಅಡ್ಡಾಳಿ, ಎಂಜಿನಿಯರ್ ಶ್ರೀಧರ್, ರತ್ನಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here