ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ಓಣಂ ಹಬ್ಬವನ್ನು ಆಚರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಪೂಕಳಂ ಮತ್ತು ತಿರುವಾದಿರ ನೃತ್ಯದ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯ ನಾಗೇಶ್ ಇವರು ಸಾಂಸ್ಕೃತಿಕ ಕಲಾತ್ಮಕ ಹಬ್ಬ ಹರಿದಿನಗಳನ್ನು ಶುದ್ಧವಾದ ವಾತಾವರಣದಲ್ಲಿ ಎಲ್ಲರೂ ಬೇದಭಾವವಿಲ್ಲದೆ ಆಚರಿಸುವುದು ಓಣಂನ ವಿಶೇಷ. ಪ್ರತಿಯೊಂದು ಹೂವಿನ ದಳವನ್ನು ಒಟ್ಟು ಸೇರಿಸಿ ಪೂಕಳಂ ಎಂಬ ರಂಗೋಲಿಯನ್ನು ರಚಿಸಿ ಒಂದೇ ಮನಸ್ಸಿನಲ್ಲಿ ಸಂಘಟಿತರಾಗುವುದು ಎಂದರು. ಜಿ.ಎಲ್.ಪಿ.ಎಸ್ ಮಂಗಲ್ಪಾಡಿ ಕಾಸರಗೋಡು ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯಿನಿ ರೇವತಿ ಇವರು ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಿ ಪ್ರತಿ ವರ್ಷ ಬಲಿಚಕ್ರವರ್ತಿಯು ಪ್ರಜೆಗಳನ್ನು ನೋಡಲು ಬರುವಾಗ ಹೂವಿನ ಅಲಂಕಾರದಿಂದ ಸ್ವಾಗತಿಸಿ, ವಿಶೇಷ ಖಾದ್ಯವನ್ನು ತಯಾರಿಸಿ, ಎಲ್ಲರನ್ನೂ ಒಗ್ಗೂಡಿಸುವುದೇ ಹಬ್ಬದ ವಿಶೇಷ ಎಂದರು. ಸೈಂಟ್ ಜೋಸೆಫ್ ಎ.ಯು.ಪಿ ಶಾಲೆ ಕಳಿಯೂರು ಕಾಸರಗೋಡು ಇಲ್ಲಿಯ ಮುಖ್ಯೋಪಾಧ್ಯಾಯಿನಿ ಪುಷ್ಪ ಇವರು ತೀರ್ಪುಗಾರರಾಗಿ ಆಗಮಿಸಿ ನಾನು, ನನ್ನದು, ನನ್ನಿಂದಲೇ ಎಲ್ಲಾ ಎಂಬ ಅಹಂ ಹೊಂದಿದ ಗುಣವನ್ನು ಬಿಟ್ಟು ಭವ್ಯ ಭಾರತದ ಕಣ್ಮಣಿಗಳಾಗುವುದು ಹಾಗೂ ಈ ಹಬ್ಬದ ಆಚರಣೆಯಿಂದ ನೆರೆ ರಾಜ್ಯದ ಸಂಸ್ಕೃತಿಯನ್ನೂ ಕೂಡ ವಿದ್ಯಾರ್ಥಿಗಳು ತಿಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತ್ ಬಳ್ಳಾಲ್, ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯ ಸೂರ್ಯನಾರಾಯಣ ಕಶೆಕೋಡಿ, ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ನಿರ್ದೇಶಕಿ ಕವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.