ಬಂಟ್ವಾಳ: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಿರಿಯ ಸಾಹಿತಿ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಹಾಗೂ ಸಾಮಾಜಿಕ , ಧಾರ್ಮಿಕ ಮುಖಂಡ ಸುದರ್ಶನ್ ಜೈನ್ ಆಯ್ಕೆಯಾಗಿರುತ್ತಾರೆ.
ಸುದರ್ಶನ್ ಜೈನ್‌ರವರು ತುಳು ಕೂಟ ಬಂಟ್ವಾಳದ ಅಧ್ಯಕ್ಷರಾಗಿ, ಜೈನ್ ಮಿಲನ್ ವಲಯ ಎಂಟರ ಮಂಗಳೂರು ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ . ಬಂಟ್ವಾಳ ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿದ್ದು ವಿವಿಧ ಸಂಘಟನೆಗಳಲ್ಲಿ ನೇತೃತ್ವ ವಹಿಸುವ ಮೂಲಕ ಸಕ್ರೀಯರಾಗಿ ಹಿರಿಯ ಸಹಕಾರಿ ಧುರೀಣರಾಗಿರುತ್ತಾರೆ.
ನೀರ್ಪಾಜೆ ಭೀಮ ಭಟ್ಟರು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕರಾಗಿದ್ದರು. ಅವರು ಸಾಹಿತಿಯಾಗಿ, ಪತ್ರಕರ್ತರಾಗಿ, ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ದುಡಿದಿದ್ದರು. ಬಿ.ಸಿ.ರೋಡಿನಲ್ಲಿ ಕನ್ನಡ ಭವನ ನಿರ್ಮಾಣದ ಕನಸು ಕಂಡಿದ್ದರು. ಅದಕ್ಕಾಗಿ ಸ್ಥಳವನ್ನು ಗುರುತಿಸಿ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದರು. ಇದೀಗ ಕನ್ನಡ ಭವನವು ನಿರ್ಮಾಣದ ಹಂತದಲ್ಲಿದೆ. ನೀರ್ಪಾಜೆ ಅಭಿಮಾನಿ ಬಳಗದ ಮೂಲಕ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುತ್ತಿದೆ. ತಾಲೂಕಿನಲ್ಲಿ ದತ್ತಿ ಉಪನ್ಯಾಸಗಳುಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮೋಹನ್ ರಾವ್, ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಕೋಶಾಧಿಕಾರಿ ಎಸ್.ಗಂಗಾಧರ ಭಟ್ ಕೊಳಕೆ ಮತ್ತು ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.