ಬಂಟ್ವಾಳ, ಸೆ. ೨೭: ಬಂಟ್ವಾಳ  ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ  ನೆರೆ ಸಂತ್ರಸ್ತರಿಗೆ ಸರಕಾರ ಮಂಜೂರು ಮಾಡಿದ ಮನೆ ನಿರ್ಮಾಣ / ದುರಸ್ತಿಯ ಕಾರ್ಯಾದೇಶವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮ ತಾಲೂಕು ಪಂಚಾಯತ್ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು
ಅವರು ಕಾರ್ಯಾದೇಶವನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶೇಷ ಕಾಳಜಿಯಡಿ ಸಂತ್ರಸ್ತರಿಗೆ ಇದೇ ಮೊದಲ ಬಾರಿಗೆ ಶೀಘ್ರವಾಗಿ ಸಹಾಯಧನ ನೀಡಲಾಗುತ್ತಿದೆ. ಸಂಪೂರ್ಣ ಹಾನಿ ಮನೆ ಕಟ್ಟುವಾಗ ಹಂತ ಹಂತ ಸಹಾಯಧನ ನೀಡಲಾಗುವುದು. ಉದ್ಯೋಗ ಖಾತರಿ ಯೋಜನೆಯಲ್ಲಿಯೂ ಮನೆ ನಿರ್ಮಾಣ ಮಾಡಲು ಅವಕಾಶ ಇದೆ ಎಂದರು.
ಜಿಪಿಎಸ್ ಮಾಡುವುದು ಮಾತ್ರ ಪಿಡಿಒಗಳ ಕೆಲಸವಲ್ಲ. ಮನೆ ನಿರ್ಮಾಣ ಹಂತದಿಂದ ಹಿಡಿದು ಫೂರ್ಣಗೊಳ್ಳುವವರೆಗೆ ಪಿಡಿಒಗಳು ಸಹಕಾರ ನೀಡಬೇಕು. ಯಾವುದೇ ದೂರು ಬಾರದಂತೆ ನೋಡಿಕೊಳ್ಳುವಂತೆ ಶಾಸಕರು ಸೂಚನೆ ನೀಡಿದರು
ಇಒ ರಾಜಣ್ಣ ಕಾರ್ಯಾದೇಶದ ಬಗ್ಗೆ ಪ್ರಸ್ತಾವಿಸಿ, ಕಾರ್ಯಾದೇಶ ಕೈಗೆ ಸಿಕ್ಕಿದ ೯೦ ದಿನಗಳೊಳಗೆ ಕಾಮಗಾರಿ‌ ಆರಂಭಿಸಬೇಕು‌‌. ಕಾಮಗಾರಿ ಆರಂಭವಾಗದೇ ಇದ್ದರೆ ಸಹಾಯಧನ ಸ್ಥಗಿತವಾಗುವ ಸಾಧ್ಯತೆ ಇದೆ. ಈ ವ್ಯವಸ್ಥೆಯೆಲ್ಲವೂ ಆನ್ ಲೈನ್ ಮೂಲಕ ನಡೆಯುವುದರಿಂದ ಫಲಾನುಭವಿಗಳು ಇಲಾಖೆಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದರು.
ಹಾನಿಗೊಳಗಾದ ಸಂತ್ರಸ್ತರನ್ನು ಎ,ಬಿ,ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಕಾರ್ಯದೇಶವನ್ನು ವಿತರಿಸಲಾಯಿತು.
ಗ್ರಾಮೀಣದಲ್ಲಿ ೭೨ ಫಲಾನುಭವಿಗಳು:
ಎ ಗ್ರೇಡ್ ನಡಿ ೧೪ ಫಲಾನುಭವಿಗಳಿಗೆ ತಲಾ ೫ ಲಕ್ಷ ರೂ., ಬಿ ಗ್ರೇಡಿನಡಿ ೨೨ ಫಲಾನುಭವಿಗಳಿಗೆ ೧ ಲಕ್ಷ ರೂ. ಹಾಗೂ ಸಿ ಗ್ರೇಡ್ ನಡಿ ೩೬ ಫಲಾನುಭವಿಗಳಿಗೆ ತಲಾ ೨೫ ಸಾವಿರ ರೂ. ವಿನ ಕಾರ್ಯಾದೇಶವನ್ನು ಶಾಸಕರು ವಿತರಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ೨೬ ಫಲಾನುಭವಿಗಳು:
ಪುರಸಭಾ ವ್ಯಾಪ್ತಿಯಲ್ಲಿ ೨೬ ಫಲಾನುಭವಿಗಳಿದ್ದು, ಇವರಲ್ಲಿ ಎ ಗ್ರೇಡ್ ನಡಿ ೭ ಫಲಾನುಭವಿಗಳು, ಬಿ ಗ್ರೇಡ್ ನಡಿ ೮ ಫಲಾನುಭವಿಗಳು ಹಾಗೂ ಸಿ ಗ್ರೇಡ್ ನಡಿ ೧೧ ಫಲಾನುಭವಿಗಳಿಗೆ ಕಾರ್ಯಾದೇಶವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಪಂ ಸದಸ್ಯ ರಮೇಶ್ ಕುಡ್ಮೇರು  ಹಾಜರಿದ್ದರು.
ಇಒ ರಾಜಣ್ಣ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here