ಬಂಟ್ವಾಳ: ಪಂಚಾಯತ್ ಅಧಿಕಾರಿಯ ನೋಟೀಸ್ ಗೆ ಹೆದರಿ ಸಾಮೂಹಿಕ ಆತ್ಮಹತ್ಯೆ ಗೆ ಮುಂದಾದ ಕುಟುಂಬ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ್ ಶಾಂತಿ ಹಾಗೂ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಜಂಟಿಯಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತ್ರಿವೇಣಿ ಅವರು ಗೋಮಾಳ ಜಾಗದಲ್ಲಿ ಅಕ್ರಮವಾಗಿ ನೂತನ ಮನೆ ಕಟ್ಟಲು ಮುಂದಾಗಿದ್ದಾರೆ, ಜೊತೆಗೆ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ ನ ಮೇಲೆಯೇ ಮನೆಯ ಅಡಿಪಾಯ ಹಾಕಲಾಗಿದ್ದಲ್ಲದೆ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದ್ದಾರೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಪಂಚಾಯತ್ ತಕ್ಷಣ ಕೆಲಸ ನಿಲ್ಲಿಸಲು ನೋಟೀಸ್ ಜಾರಿ ಮಾಡಿತ್ತು.
ಅಲ್ಲದೆ ಪಂಚಾಯತ್ ನಿಯಾಮಾನುಸಾರ ಅನುಮತಿ ಪಡೆದ ಬಳಿಕ ಕೆಲಸ ಮುಂದುವರಿಸಲು ಸೂಚಿಸಲಾಗಿತ್ತು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತ್ರಿವೇಣಿಯವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಸುಳ್ಳು, ಇವರು ಈ ಮೊದಲೆ ಸರಕಾರದಿಂದ 94ಸಿ ಹಕ್ಕುಪತ್ರ ದಂತೆ ಪಡೆದ ಸ್ಥಳದಲ್ಲಿ ಮನೆ ನಂ.3-181 ರಲ್ಲಿ ಮನೆ ಕಟ್ಟಿದ್ದು ಅದು ಸುಸ್ಥಿತಿಯಲ್ಲಿದೆ, ಅದರಲ್ಲಿಯೇ ಇವರು ವಾಸವಾಗಿದ್ದಾರೆ.
ಈ ಮನೆಯ 50 ಮೀ ದೂರದಲ್ಲಿ ಸರಕಾರಿ ಗೋಮಾಳ ಜಾಗದಲ್ಲಿ ಪಂಚಾಯತ್ ಅನುಮತಿ ಪಡೆಯದೆ ಮನೆ ಕಟ್ಟಲು ಹೊರಟಿರುವುದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ