ವಿಟ್ಲ: ಮನುಷ್ಯನಿಗೆ ಮಾಡುವ ಪ್ರತಿಯೊಂದು ಸಹಾಯವನ್ನು ದೇವರು ಮೆಚ್ಚುತ್ತಾನೆ. ರೋಗಿಗಳಿಗೆ ಪ್ರತಿಫಲವಿಲ್ಲದೇ ಸೇವೆಯನ್ನು ಮಾಡಬೇಕು. ಪ್ರಸ್ತುತ ಕಾಲ ಘಟ್ಟದಲ್ಲಿ ಅತೀ ಅವಶ್ಯಕವಾದುದು ರಕ್ತದಾನವಾಗಿದ್ದು, ಸಂಘಟನೆಗಳಿಂದ ಜನರಿಗೆ ಅತ್ಯವಶ್ಯಕವಿರುವ ಸಹಕಾರ, ಸಹಾಯ ನಡೆಯಬೇಕು ಎಂದು ಕುದ್ದುಪದವು ಮಲ್‌ಹರ್ ಮಸೀದಿ ಇಮಾಮರಾದ ಅಧ್ಯಕ್ಷ ಮುನೀರ್ ಆಝ್ಹರಿ ಹೇಳಿದರು.
ಅವರು ಸೋಮವಾರ ಕುದ್ದುಪದವು ಖುವ್ವತುಲ್ ಇಸ್ಲಾಂ ಮದ್ರಸಾದಲ್ಲಿ ರಹ್ಮಾ ರಿಲೀಫ್ ಸೆಲ್ ಅಡ್ಯನಡ್ಕ ಮತ್ತು ಲೈಫ್ ಲೈನ್ ಫೌಂಡೇಶನ್ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಮಾತನಾಡಿ ಮತ ಧರ್ಮಗಳು ಹಲವು ಇದ್ದರೂ ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇ ಆಗಿದೆ. ರಕ್ತದಾನ ದೇಹಕ್ಕೆ ಉತ್ತಮವಾಗಿರುವ ಜತೆಗೆ ಒಂದು ಜೀವವನ್ನು ಉಳಿಸಲು ಸಾಧ್ಯವಿದೆ. ಯುವಕರು ರಕ್ತದಾನದಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತಾಗಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯುವಕರಿಗೆ ರಕ್ತ ದಾನದ ಮಹತ್ವ ಸಾರುವ ಕಾರ್ಯ ನಡೆಯಬೇಕು. ತುರ್ತು ಪರಿಸ್ಥಿತಿಯಲ್ಲಿ ರಕ್ತಕ್ಕಾಗಿ ಪರದಾಡುವ ಕಾರ್ಯವನ್ನು ತಪ್ಪಿಸಲು ಇಂಥ ಕಾರ್ಯಕ್ರಮ ಸಹಕಾರಿ. ರಕ್ತ ಸಂಗ್ರಹ ಮಾಡುವ ವಿಚಾರದಲ್ಲಿ ಸಂಘಟನೆ ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೈಪ್ ಲೈನ್ ಫೌಂಡೇಶನ್ ಶರೀಫ್ ಮೂಸಾ ಕುದ್ದುಪದವು ವಹಿಸಿದ್ದರು. ಸುಮಾರು 40 ಮಂದಿ ರಕ್ತದಾನ ಮಾಡಿದರು.
ಅಡ್ಯನಡ್ಕ ರಹ್ಮಾನಿಯಾ ಜುಮ್ಮಾ ಮಸೀದಿಯ ಮುದರ್ರಿಸಿ ಅಬ್ದುಲ್ಲಾ ರಹ್ಮಾನಿ, ಮರಕ್ಕಿಣಿ ಬದ್ರ್ ಹುಸೈನ್ ಜುಮ್ಮಾ ಮಸೀದಿ ಮುದರ್ರ್‍ಇಸಿ ನೌಫಲ್ ಫೈಝಿ, ಎಸ್‌ಡಿಪಿಐ ಕ್ಷೇತ್ರ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಲೈಫ್ ಲೈನ್ ಫೌಂಡೇಶನ್ ಯುಎಇ ಪ್ರತಿನಿಧಿ ಹನೀಫ್ ಅರಿಯಮೂಲೆ, ಬ್ಲಡ್ ಹೆಲ್ಫ್ ಕೇರ್ ಕರ್ನಾಟಕದ ಗೌರವಾಧ್ಯಕ್ಷ ನಝೀರ್ ಹುಸೈನ್, ಕುದ್ದುಪದವು ಖುವ್ವತುಲ್ ಇಸ್ಲಾಂ ಮದ್ರಸ್ ಅಧ್ಯಾಪಕ ಶಾಜಹಾನ್ ಅಝ್ಹರಿ, ಅಡ್ಯನಡ್ಕ ರಹ್ಮಾ ರಿಲೀಫ್ ಸೆಲ್ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ, ಹಮೀದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
ಆದಂ ಝಿಯಾದ್ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಪ್ರಸ್ತಾವನೆಗೈದರು. ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.