Wednesday, October 18, 2023

’ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುವ ಹಣದ ಬಗ್ಗೆ ಇಲಾಖೆಗಳಲ್ಲಿರುವ ಗೊಂದಲ ನಿವಾರಿಸಿ’: ಸುಭಾಶ್ಚಂದ್ರ ಶೆಟ್ಟಿ

Must read

ವಿಟ್ಲ: ಕಿಸಾನ್ ಸಮ್ಮಾನ್ ಹಾಗೂ ಕೊಳೆರೋಗದ ಹಣ ರೈತರ ಖಾತೆಗೆ ಜಮೆ ಆಗುವ ಬಗ್ಗೆ ಇಲಾಖೆಗಳ ನಡುವೆ ಗೊಂದಲವಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತೋಟಗಾರಿಕಾ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ. ಈ ಗೊಂದಲವನ್ನು ತಕ್ಷಣವೇ ಪರಿಹರಿಸಿಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ತಿಳಿಸಿದರು.
ಅವರು ಬುಧವಾರ ಕೊಳ್ನಾಡು ಗ್ರಾಮ ಪಂಚಾಯಿತಿನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರದ ಕಿಶನ್ ಹಾಗೂ ಕೊಳೆ ರೋಗದ ಹಣ ರೈತರ ಖಾತೆಗೆ ಜಮೆ ಆಗುವ ಬಗ್ಗೆ ಇನ್ನೂ ಗೊಂದಲ ನಿವಾರಣೆಯಾಗಿಲ್ಲ. ಪ್ರಗತಿ ಪರಿಶೀಲನಾ ಸಭೆ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ. ಇಲ್ಲಿ ಜನರ ಸಮಸ್ಯೆಗಳಿಗೆ ಸ್ಪಷ್ಟತೆಯ ಉತ್ತರ ನೀಡಬೇಕು. ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ನಡುವೆ ಇರುವ ಗೊಂದಲವನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆಯವರ ಮನೆ ಮನೆ ಭೇಟಿ ಕಾರ್ಯ ನಡೆಯಬೇಕು. ಶಾಲೆಗೆ ಅಂಗಡಿನವಾಡಿ ಕೇಂದ್ರಗಳಿಗೂ ಅವರೂ ಭೇಟಿ ನೀಡಬೇಕು. ಆರೋಗ್ಯದ ಬಗ್ಗೆ ಜನರ ಜತೆ ಸಮಾಲೋಚನೆ ನಡೆಸಬೇಕು. ಪ್ರಗತಿಪರಿಶೀಲನಾ ಸಭೆಗೆ ಬರುವ ಅಧಿಕಾರಿಗಳು ಸಮರ್ಪಕ ಮಾಹಿತಿ ಪಡೆದುಕೊಂಡು ಬರಬೇಕು. ಕೇವಲ ಕಾಟಾಚಾರಕ್ಕೆ ಬಂದರೆ ಈ ಸಭೆಗೆ ಅರ್ಥ ಇರುವುದಿಲ್ಲ ಎಂದರು.
ಸಾಮಾಜಿಕ ಅರಣ್ಯ ಇಲಾಖೆಯ ಕೆಲವು ನಿರ್ಧಾರದಿಂದ ಬಡ ಜನರು ೯೪ಸಿ ಹಕ್ಕು ಪತ್ರ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಬಗ್ಗೆ ಇಲಾಖೆಯವರು ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದರು. ಮೆಸ್ಕಾಂ ಇಲಾಖೆ ಗೆಲ್ಲು ಕಡಿಯುವ ವಿಚಾರದಲ್ಲಿ ಖಾಸಗಿಯವರ ಆಕ್ಷೇಪ ಎಂಬ ಕಾರಣಕ್ಕೆ ಹಿಂದೇಟು ಹಾಕಬಾರದು. ಈ ಬಗ್ಗೆ ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯಿತಿ ಗಮನಕ್ಕೆ ತರಬೇಕು. ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಬೇಕು ಎಂದರು.
ಕುಡ್ತಮುಗೇರುನಲ್ಲಿರುವ ಪ್ರಾಥಮಿಕ ವಿಸ್ತರಣಾ ಕೇಂದ್ರವನ್ನು ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಮುಚ್ಚಿದ್ದು, ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂಎಸ್ ಮಹಮ್ಮದ್ ಅವರು ದಿಢೀರನೆ ಮುಚ್ಚುವಂತಹ ಸ್ಥಿತಿ ಯಾಕೆ ಬಂದಿದೆ. ಇದೊಂದು ನಾಟಕ ಎಂದು ಹೇಳಿದ ಅವರು ಸಂಬಂಧಪಟ್ಟ ಇಲಾಖೆಗೆ ಕರೆ ಮಾಡಿ ಕೇಂದ್ರವನ್ನು ಮತ್ತೆ ತೆರೆಯುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಿಡಿಒ ರೋಹಿಣಿ.ಬಿ., ಗ್ರಾಮ ಕರಣಿಕ ಅನಿಲ್, ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಯಿಷಾ ಭಾನು ನಿರೂಪಿಸಿ, ವಂದಿಸಿದರು.

More articles

Latest article