ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ ಇಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ’ಉತ್ಥಾನ’ ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರವು ದಿನಾಂಕ 29ರಂದು ಉದ್ಘಾಟನೆಗೊಂಡಿತು.
ಧರ್ಮ ಸಂಸ್ಕಾರವನ್ನು ತೊರೆದರೆ ಭಾರತವೊಂದು ಬರಡು ಭೂಮಿಯಾಗುವುದು, ತನ್ನ ಸತ್ವವನ್ನು ಕಳೆದುಕೊಳ್ಳುವುದು. ದೇಶಕ್ಕೆ ಚೈತನ್ಯ ಮೂಡಲು ಸಂಸ್ಕಾರದ ಅಗತ್ಯವಿದೆ. ಸಂಸ್ಕಾರವನ್ನು ಕೊಡುವುದು ಶಿಕ್ಷಣ ಸಂಸ್ಥೆಗಳ ಮೂಲಕ ಮಾತ್ರ ಸಾಧ್ಯ ಎನ್ನುವ ಹಿನ್ನೆಲೆಯಲ್ಲಿ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಬದಲಾವಣೆಯನ್ನು ಯಾವ ಹಂತದಲ್ಲಿ ರೂಢಿಸಿಕೊಳ್ಳಬೇಕು, ನಡವಳಿಕೆ ಹೇಗೆ ಮೈಗೂಡಿಕೊಳ್ಳಬೇಕು. ಸಮಯದ ಸದುಪಯೋಗ, ಸಮಾಜದ ಮಧ್ಯೆ ಹೇಗಿರಬೇಕು ಎಂದು ತಿಳಿಸಿಕೊಡುವುದರಿಂದ ಈ ಶಿಬಿರವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯೆ ಜ್ಞಾನಕ್ಕೆ ಸೀಮಿತವಾದದ್ದು, ಸಂಸ್ಕಾರ ವೃದ್ಧಿಗೊಳ್ಳಲು ಇಂತಹ ಶಿಬಿರಗಳ ಅವಶ್ಯಕತೆಯಿದೆ. ಭಾವನೆಗಳ ಸಧೃಡತೆಯು ಈ ಶಿಬಿರದ ಮೂಲಕ ಸಾಧ್ಯ. ಹೆಣ್ಣು ಮಕ್ಕಳು ತಮ್ಮ ಬದುಕನ್ನು ಸಂಪೂರ್ಣಗೊಳಿಸಲು ಬೇಕಾದಂತಹ ಶಿಕ್ಷಣವನ್ನು ಈ ಶಿಬಿರದ ಮೂಲಕ ಪಡೆದುಕೊಳ್ಳಿ ಎಂದು ರೇಖಾ ಜೆ ಶೆಟ್ಟಿ, ಬಂಟ್ವಾಳ ಪುರಸಭೆಯ ಮುಖ್ಯ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಶಿಬಿರಾಧಿಕಾರಿಯಾದ ವಿವೇಕಾನಂದ ಪದವಿ ಪೂರ್ವ ವಿಭಾಗದ ಗಣಿತಶಾಸ್ತ್ರ ಉಪನ್ಯಾಸಕಿಯಾದ ನಿರ್ಮಲಾ, ಕಮಲಾ ಪ್ರಭಾಕರ್ ಭಟ್, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಶ್ರೀರಾಮ ಪದವಿ ವಿದ್ಯಾಲಯದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕೆ ಎನ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಶಿಬಿರದ ಕಾರ್ಯವಾಹಕಿ ಶೋಭಾ ವಿ ಶೆಟ್ಟಿ ಸ್ವಾಗತಿಸಿ, ಶೈಲಿನಿ ಬಿ ವಂದಿಸಿ, ಶೋಭಾ ಕಾರ್ಯಕ್ರಮ ನಿರೂಪಿಸಿದರು.