ಬಂಟ್ವಾಳ: ಪುರಸಭೆಯು ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆ ಕಸ ನಿರ್ವಹಣಾ ಶುಲ್ಲವನ್ನು ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಮತ್ತು ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಆರಂಭಿಸಬೇಕು ಎಂದು ದ.ಕ.ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರಪೂಜಾರಿ ಒತ್ತಾಯಿಸಿದ್ದಾರೆ. ತೆರಿಗೆಯೊಂದಿಗೆ ಕಸ ನಿರ್ವಹಣಾ ಶುಲ್ಕ ವಸೂಲಿ ಅಸಮಂಜಸ, ಅವೈಜ್ಙಾನಿಕವಾಗಿದ್ದು, ಪುರಸಭೆಯ ಈ ಕ್ರಮ ಪುರವಾಸಿಗಳಿಗೆ ತೊಂದರೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ತಡೆಯಾಗಿರುವ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪುನರಾರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪುರಸಭೆ ಈ ಕುರಿತು ಸ್ಪಂದಿಸದಿದ್ದಲ್ಲಿ ನಾಗರಿಕರನ್ನು ಒಗ್ಗೂಡಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.