


- ಫಾರೂಕ್ ಬಂಟ್ವಾಳ
ಬಂಟ್ವಾಳ: ಅದೊಂದು ಸಾವು-ನೋವಿನೊಂದಿಗೆ ನರಳಾಡುವ ಬಡ ಕುಟುಂಬ!
ಹೆಣ್ಮಕ್ಕಳೇ ತುಂಬಿರುವ ಹೆಣ್ಮಕ್ಕಳ ಅಸಹಾಯತೆ ಯ ಕಣ್ಣೀರು ಬಿಟ್ಟರೆ, ಒಂದೇ ಒಂದು ಗಂಡ್ಮಕ್ಕಳ ಆಸರೆಯಿಲ್ಲ!!
ಮನೆಯ ಯಜಮಾನಿ ಬೇಬಿ ನಾಯಕ್, ಕ್ಯಾನ್ಸರ್ ಪೀಡಿತರಾಗಿ ಬೆಡ್ ಮೇಲೆ ಮಲಗಿದ್ದಾರೆ. ಸಾವಿನ ಬಾಗಿಲು ತಟ್ಟುತ್ತಿರುವ ಈ ತಾಯಿ, ಗಂಡ ಮತ್ತು ಗಂಡು ಮಕ್ಕಳನ್ನು ಕಳೆದಕೊಂಡು ಜೀವಕ್ಕೆ ಬದುಕೇ ಭಾರವಾಗುತ್ತಿದೆ. ಜೀವನೋಲ್ಲಾಸ ಕಳೆದಿರುವ ಈ ಕುಟುಂಬದ ಏಕೈಕ ಆಶ್ರಯವಾದ ಮನೆಯನ್ನು ಸ್ಥಳೀಯ ಪಂಚಾಯತ್ ನೆಲಸಮ ಮಾಡಲು ಹೊರಟಿದೆ. ಈಗಾಗಲೇ ಎರಡೆರಡು ನೋಟೀಸ್ ಜಾರಿಗೊಳಿಸಿದ ಪಿಡಿಒ ಪರೋಕ್ಷವಾಗಿ ಥ್ರೆಡ್ ನೀಡುತ್ತಿದ್ದಾರೆ.
ಅಧಿಕಾರಿಯ ನೋಟೀಸು ಜಾರಿಗೆ ತತ್ತರಿಸಿ ಹೋದ ಮನೆ ಮಂದಿ ಅವಮಾನ ಸಹಿಸದೇ ಸಾಮಾಜಿಕ ಆತ್ಮಹತ್ಯೆ ಮಾಡಲು ನಿರ್ಧರಿಸಿದೆ. ಇಂಥ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದದ್ದು, ಬಂಟ್ವಾಳದ ಕುಕ್ಕಿಪ್ಪಾಡಿ ಗ್ರಾಮದಲ್ಲಿ. ಇಲ್ಲಿನ ನೇಲ್ಯ ಕುಮೇರ್ ನಿವಾಸಿ ಬೇಬಿ ನಾಯಕ್ (66) ಕಳೆದಾರು ತಿಂಗಳಿನಿಂದ ಕ್ಯಾನ್ಸರ್ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದಾರೆ.
ಚಿಕಿತ್ಸೆ ಈಗಾಗಲೇ ಸಾವಿರಾರು ರೂ. ಖರ್ಚು ಮಾಡಿದ ಬೇಬಿ ಕುಟುಂಬಕ್ಕೆ ದಿಕ್ಕು ದೋಚಿದಂತಾಗಿದೆ. ಕೋರ್ಟ್ ಗುಮಾಸ್ತನಾಗಿದ್ದ ಬೇಬಿ ಗಂಡ ಗುರುದತ್ತ ನಾಯಕ್, 22 ವರ್ಷದ ಹಿಂದೆ ತೀರಿ ಹೋಗಿದ್ದಾರೆ. ಗಂಡನ ಪಿಂಚಣಿ ದುಡ್ಡು ಸಾಲದೇ, ಬೀಡಿ ಕಟ್ಟಿ ಮಕ್ಕಳನ್ನು ಸಾಕುತ್ತಿದ್ದರು.
ಬೇಬಿಯವರಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಒಬ್ಬ ಮಗ ನಾಮ್ ದೇವ್ 7 ವರ್ಷದ ಹಿಂದೆ ತೀರಿದರೆ, ಮತ್ತೊಬ್ಬ ಮಗ ಪ್ರಸಾದ್ ಸಾವನ್ನಪ್ಪಿ ಏಳು ತಿಂಗಳಾಯಿತು.
ಇವರ ಒಬ್ಬ ಮಗಳು ತ್ರಿವೇಣಿ (42) ವಾಹನ ಅಪಘಾತದಲ್ಲಿ ಕಾಲು ಊನತೆಕ್ಕೀಡಾದರು. ಹದಿಮೂರು ಸಲ ಶಸ್ತ್ರಚಿಕಿತ್ಸೆ ಯಾದರೂ, ಕಾಲು ಸಶಕ್ತಗೊಂಡಿರಲಿಲ್ಲ. ಕಾಲು ಮೂಳೆ ದುರ್ಬಲಗೊಂಡು, ಸಹಿಸಲಾರದ ನೋವು ತಿನ್ನುತ್ತಿದ್ದಾರೆ. ತ್ರಿವೇಣಿ ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡರು. ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥ ಪಾಲಕರಾಗಿರುವ ತ್ರಿವೇಣಿಗೆ ಮೂವರು ಹೆಣ್ಮಕ್ಕಳು. ಬ್ಯಾಂಕಿನಿಂದ ಶಿಕ್ಷಣ ಸಾಲ ಪಡೆದು ಮಕ್ಕಳನ್ನು ಓದಿಸುತ್ತಿದ್ದಾರೆ.
ಬೇಬಿಯವರ ಕುಟುಂಬಕ್ಕೆ ಇರುವ ಒಂದೇ ಆಸರೆಯೆಂದರೆ ಒಂದು ಗುಡಿಸಲಿನಂತಿರುವ ಮನೆ. ಬೀಳುವ ಸ್ಥಿತಿಯಲ್ಲಿರುವ ಈ ಮನೆಯನ್ನು ಕೆಡವಿ ಸಣ್ಣ ಮನೆಯೊಂದನ್ನು ಸ್ಥಳೀಯರು ಸೇರಿ ಕಟ್ಟಿ ಕೊಡಲು ಮುಂದಾದರು.
ಅಷ್ಟರಲ್ಲೇ ಪಂಚಾಯತ್ ಪಿಡಿಓಯಿಂದ ನೋಟೀಸ್ ಒಂದು ದಿಢೀರ್ ಎದುರಾಯಿತು. ನೀರು ಪೈಪ್ ಲೈನ್ ಮೇಲೆ ಮನೆ ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಕಟ್ಟಡ ತೆರವು ಗೊಳಿಸಬೇಕೆಂದು ಎಚ್ಚರಿಸಿದರು. ಅಧಿಕಾರಿಯ ವಾರ್ನಿಂಗ್ ಗೆ ಹೆದರಿದ ಕುಟುಂಬ ಪೈಪ್ ಲೈನ್ ಸ್ಥಳವನ್ನು ಬಿಟ್ಟು ಮನೆ ಕಟ್ಟಲು ಆರಂಭಿಸಿತು. ಆದರೂ ಸುಮ್ಮನಾಗದ ಅಧಿಕಾರಿ, ನಿಮ್ಮ ಮನೆ ಗೋಮಾಳದಲ್ಲಿದೆ ಎಂದು ಮತ್ತೊಂದು ಸಬೂಬು ಹೇಳುತ್ತಾ ನೋಟೀಸ್ ನೀಡಿತು.
ನಾವು ಜೀವ ತೆಗಿತ್ತೇವೆ!
ನೋಟೀಸ್ ಮೇಲೆ ನೋಟೀಸ್ ಜಾರಿಯಾದ ಬೆನ್ನಿಗೆ ಕಂಗಾಲಾದ ಬೇಬಿ ಕುಟುಂಬ, ಅಧಿಕಾರಿಯ ಎಚ್ಚರಿಕೆಗೆ ಹೆದರಿ ಸಾಮಾಜಿಕ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡು ಅಧಿಕಾರಿಗಳಿಗೆ ಪತ್ರ ಬರೆದಿದೆ. ‘ನಾವು ಯಾರಿಗೂ ಅನ್ಯಾಯ, ಮೋಸ ಮಾಡಿಲ್ಲ. ನಾವು ಸ್ವಾಭಿಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಅಧಿಕಾರಿಯೇ ಕಾರಣ’ ಎಂದು ಕಣ್ಣೀರು ಹಾಕುತ್ತಿದ್ದಾರೆ ತ್ರಿವೇಣಿ.
ಗೋಮಾಳ ಜಮೀನಿನಲ್ಲಿ ಮನೆ ಕಟ್ಟಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಿತರಿಗೆ ನೋಟೀಸ್ ನೀಡಲಾಗಿದೆ. ಸದ್ರೀಯವರ ದಾಖಲೆ ಪತ್ರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದಾಗಿ ಪಂಚಾಯತ್ ಪ್ರಬಾರ ಪಿಡಿಓ ಗಣೇಶ ಶೆಟ್ಟಿಗಾರ್ ತಿಳಿಸಿದ್ದಾರೆ.
ಎಲ್ಲವೂ ಗೋಮಾಳ ನಿವೇಶನ!
ಇಲ್ಲಿರುವ ಬಹುತೇಕ ಮನೆಗಳು ಗೋಮಾಳ ನಿವೇಶನದಲ್ಲಿದೆ. ನಿವಾಸಿಗಳು ಮನೆಯ ಅಡಿಸ್ಥಳಕ್ಕೆ ಹಕ್ಕುಪತ್ರ ಪಡೆದಿದ್ದಾರೆ. ಆದರೆ ಕೇವಲ ಒಬ್ಬರನ್ನೇ ಗುರಿಯಾಗಿಸಿ ಥ್ರೆಡ್ ನೀಡುತ್ತಿರುವ ಅಧಿಕಾರಿಗಳ ದರ್ಪದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದಾಗಿ ಸಾಮಾಜಿಕ ಕಾರ್ಯಕರ್ತ ಅಶೋಕ್ ಹಲಾಯಿ ಎಚ್ಚರಿಸಿದ್ದಾರೆ.


