ಬಂಟ್ವಾಳ: ಬೆಂಗಳೂರು ಸಿ.ಐ.ಡಿ ವಿಭಾಗಕ್ಕೆ ಪೋಲೀಸ್ ನಿರೀಕ್ಷಕರಾಗಿ ಪದೋನ್ನತಿಗೊಂಡು ವರ್ಗಾವಣೆ ಅಗಿರುವ ಬಂಟ್ವಾಳ ಟ್ರಾಫಿಕ್ ಎಸ್.ಐ. ಮಂಜುನಾಥ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಮೆಲ್ಕಾರ್ ನ ಹೊಟೇಲೊಂದರಲ್ಲಿ ನಡೆಯಿತು.
ಈ ಕಾರ್ಯಕ್ರಮದ ಆಧ್ಯಕ್ಷತೆವಹಿಸಿದ್ದ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರು ಮಾತನಾಡಿ ಮಂಜುನಾಥ್ ಅವರು ಒಬ್ಬ ದಕ್ಷ ಅಧಿಕಾರಿಯಾಗಿದ್ದರು.
ಬಂಟ್ವಾಳ ಟ್ರಾಫಿಕ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಯ ಮೂಲಕ ಟ್ರಾಫಿಕ್ ಅವ್ಯಸ್ಥೆಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ನೆರವಾಗಿದ್ದರು ಎಂದು ಅವರು ಹೇಳಿದರು.
ಕಾನೂನು ಸರಿಯಾಗಿ ಪಾಲನೆಯಾದಾಗ ಸಂಚಾರಿ ನಿಯಮಗಳು ಕಷ್ಟವಲ್ಲ ಎಂದು ಅವರು ಹೇಳಿದರು. ಪ್ರತಿಯೊಂದು ನಿಯಮಗಳ ಆರಂಭದಲ್ಲಿ ಕಷ್ಟ ವಾಗುತ್ತದೆ ಆದರೆ ಪ್ರತಿಯೊಬ್ಬರು ಪಾಲಿಸಿದಾಗ ಅಂತಹ ಸಮಸ್ಯೆಗಳು ಉದ್ಬವವಾಗುವುದಿಲ್ಲ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮಾತನಾಡಿ ಸರಕಾರಿ ಕೆಲಸದಲ್ಲಿ ಪದೋನ್ನತಿ ಎಂಬುದು ಸುವರ್ಣವಕಾಶ. ಮಾನವೀಯ ಮೌಲ್ಯಗಳನ್ನು ಹೊಂದಿರುವ ಕೆಲಸಗಳು ಪೋಲೀಸ್ ಇಲಾಖೆಯಿಂದ ಹೆಚ್ಚು ಹೆಚ್ಚು ನಡೆದಾಗ ಮಾತ್ರ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅಂತಹ ಕೆಲಸ ಮಡಿಕೇರಿಯ ಜೋಡುಪಾಲದಲ್ಲಿ ಮಂಜುನಾಥ್ ಎಸ್.ಐ.ಮಾಡಿದ್ದಾರೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್, ವಿಟ್ಲ ಎಸ್.ಐ. ಯಲ್ಲಪ್ಪ, ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ
ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಟ್ರಾಫಿಕ್ ಎಸ್.ಐ. ರಾಮ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಿಬ್ಬಂದಿ ವಿವೇಕ್ ವಂದಿಸಿದರು.