ವೆಚ್ಚಗಳು ಅನಿವಾರ್ಯ. ಶ್ರಮದ ವೆಚ್ಚ, ಸಮಯದ ವೆಚ್ಚ, ಬುದ್ಧಿ ಶಕ್ತಿಯ ವೆಚ್ಚ, ವಿದ್ಯುತ್ ವೆಚ್ಚ, ನೀರಿನ ವೆಚ್ಚ, ಸಾಧನ ಸಾಮಗ್ರಿಗಳ ವೆಚ್ಚ ಹೀಗೆ ಅನೇಕ ವೆಚ್ಚಗಳಿದ್ದರೂ ಈ ಲೇಖನ ಹಣ ಕಾಸು ವೆಚ್ಚವನ್ನಷ್ಟೇ ಆಧರಿಸಿದೆ. ಹಣವುಳ್ಳವರು ಬಹಳಷ್ಟು ವೆಚ್ಚ ಮಾಡುತ್ತಾರೆ. ಹಣ ವಿಲ್ಲದವರು ವೆಚ್ಚ ಮಾಡಲು ಹೆದರುತ್ತಾರೆ. ವೆಚ್ಚಗಳು ಅನಿವಾರ್ಯವಾದುದೆಂಬುದು ಸತ್ಯ. ಆದರೆ ದುಂದು ವೆಚ್ಚವೆಂಬುದು ಖಂಡಿತವಾಗಿಯೂ ಅನಪೇಕ್ಷಣೀಯ. ದುಂದುವೆಚ್ಚಗಳು ಸಭೆ ಸಮಾರಂಭಗಳ ಆತಿಥ್ಯ, ಅಲಂಕಾರಗಳ ಹೆಸರಿನಲ್ಲಾಗುತ್ತವೆ, ಬಟ್ಟೆ ಬರೆಗಳ ಖರೀದಿಗಳ ಮೂಲಕ ಆಗುತ್ತವೆ. ಆಭರಣಗಳನ್ನು ಸಂಗ್ರಹಿಸುವುದಕ್ಕಾಗಿಯೂ ದುಂದು ವೆಚ್ಚವಾಗುತ್ತದೆ. ದುಂದು ವೆಚ್ಚವಾಗುವ ಅನೇಕ ಸಂದರ್ಭಗಳಿವೆ. ಅಗತ್ಯವಾದುದಕ್ಕಿಂತ ಹೆಚ್ಚಿನದನ್ನು ಗಳಿಸಲು ಅಥವಾ ಸಂಗ್ರಹಿಸಲೋಸುಗ ಮಾಡುವ ವೆಚ್ಚಗಳು, ಅನಗತ್ಯ ತಿರುಗಾಡಲು ಮಾಡುವ ವೆಚ್ಚಗಳು ಇವೆಲ್ಲವೂ ದುಂದು ವೆಚ್ಚಗಳೇ ಆಗಿವೆ.
ಸಾಮಾನ್ಯವಾಗಿ ಇಂದು ಅತಿಯಾದ ದುಂದು ವೆಚ್ಚ ಮೊಬೈಲ್ ಮತ್ತು ಸಾಮಾಜಿಕ ತಾಣಗಳಲ್ಲಿ ಡೌನ್ ಲೋಡಿಂಗ್ ಅಪ್ ಲೋಡಿಂಗ್ ಹೆಸರಿನಲ್ಲಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಹಣ ಮತ್ತು ಸಮಯ ಎರಡೂ ದುಂದು ವೆಚ್ಚವಾಗುತ್ತಿರುವುದರಿಂದ ಇವು ನಮ್ಮ ಪತನಕ್ಕೆ ಕಾರಣವಾಗುತ್ತವೆಂಬ ಭಯ ನಮಗಿರಬೇಕು. ಬಸ್ ಹತ್ತಿ ಕುಳಿತೊಡನೆ ಸಾಮಾನ್ಯವಾಗಿ ಕಾಣುವ ದೃಶ್ಯ ಪ್ರಯಾಣಿಕರು ಮೊಬೈಲ್ ನೊಂದಿಗೆ ಮಾತುಕತೆ ಅಥವಾ ಯಾವುದೋ ಸಿನಿಮಾ ವೀಕ್ಷಣೆ, ಸಾಮಾಜಿಕ ತಾಣಗಳಲ್ಲಿ ಓಡಾಟ. ಕೆಲವರು ವಾಹನದಿಂದ ಇಳಿಯುವ ಸಂದರ್ಭಗಳಲ್ಲಿ ಮೊಬೈಲ್ ಬಂದ್ ಮಾಡಿ ಬಸ್ ಇಳಿದೊಡನೆಯೇ ಮೊಬೈಲ್ ಅದುಮಲು ಆರಂಭಿಸುತ್ತಾರೆ. ಇನ್ನೂ ಕೆಲವರು ಚಾಲಕರು ವಾಹನ ನಿಲುಗಡೆ ಮಾಡಿ ವಾಹನದಿಂದ ಇಳಿಯುವುದೇ ಮೊಬೈಲ್ ಸರಸ ಸಂಭಾಷಣೆಯೊಂದಿಗೆ ಎಂಬುದೂ ದಿಟ. ದೈನಂದಿನ ಕೆಲಸ ಮಾಡಬೇಕಾದ ಅವಧಿಯಲ್ಲಿ ಅರ್ದಕ್ಕಿಂತಲೂ ಹೆಚ್ಚು ವೇಳೆ ಮೊಬೈಲಿಗೆ ಮೀಸಲಾದರೆ ಹೇಗೆ? ದಿನದ ಶ್ರಮ-ದುಡಿಮೆಯ ಅರ್ಧಕ್ಕಿಂತಲೂ ಹೆಚ್ಚು ಭಾಗ ಮೊಬಯಿಲ್ ಕರೆನ್ಸಿಗೆ ಬಳಕೆಯಾದರೆ ಹೇಗೆ? ಇಷ್ಟಾದರೂ ಮಾತುಕತೆ ಭಾರೀ ಲಾಭ ಕುದುರಿಸುವ ವ್ಯವಹಾರಗಳಿಗೆ ಸಂಭಂಧಿಸಿರದೇ ಬರೇ ಲೋಕಾಭಿರಾಮ. ಊಟ ಆಯಿತಾ? ತಿಂಡಿ ಏನು? ಏನು ಮಾಡುತ್ತಿದ್ದೀರಿ ಎಂದು ಹತ್ತಾರು ಜನರಲ್ಲಿ ಹರಟೆಗಾಗಿ ಮೊಬೈಲ್ ತುಂಬಿದ ಹಣ ವ್ಯಯವಾದರೆ ಅದು ದುಂದು ವೆಚ್ಚ. ಸಂಪರ್ಕ ಉಳಿಸಲು ಮೊಬೈಲನ್ನು ಮಿತವಾಗಿ ಬಳಸಲು ಕಲಿಯ ಬೇಕು. ಶುಭ ಮುಂಜಾನೆ, ಶುಭ ರಾತ್ರಿ ಇಂತಹ ಸಂದೇಶಗಳ ಮೂಲಕ ಸಂಪರ್ಕವುಳಿಸುವ ಪ್ರಯತ್ನಗಳಾಗಬೇಕು. ಮೊಬೈಲ್ ನಲ್ಲಿ ಮಾತನಾಡುತ್ತಾ ಇದ್ದಂತೆ ಹಣ ವ್ಯಯವಾಗುತ್ತಾ ಇರುತ್ತದೆ. ಕೆಲವೊಮ್ಮೆ ಆ ಹಣ ಅವರ ಮನೆಗೆ ಹೋಗಿ ಬರುವ ಹಣದ ದುಪ್ಪಟ್ಟು ಮುಪ್ಪಟ್ಠಾಗುವ ಸಾಧ್ಯತೆಯೂ ಇದೆ. ಹಾಗಾಗಿ ಮಾತು-ಕತೆಗಾಗಿ ಮೊಬೈಲ್ ಬಳಸದೆ ಅಗತ್ಯದ ವಿಚಾರ ತಿಳಿಯುವ ಹಗೂ ತಿಳಿಸುವ ಸಂದರ್ಭಕ್ಕಷ್ಟೇ ಮಿತಿಗೊಳ್ಳುವುದೊಳಿತು.
ಬಹಳಷ್ಟು ದುಂದು ವೆಚ್ಚ ಆಡಂಬರದ ಕಾರ್ಯಕ್ರಮಗಳಲ್ಲಾಗುತ್ತದೆ. ಹತ್ತಾರು ಬಗೆಯ ಭಕ್ಷ್ಯಗಳು, ಸಿಹಿತಿಂಡಿಗಳು, ಪಾನೀಯಗಳು ಸಮಾರಂಭಗಳಿಗೆ ಮೆರುಗು ನೀಡುವುದಕ್ಕಿಂತ ಹೆಚ್ಚಾಗಿ ಕೊರಗು ನೀಡುತ್ತವೆ. ತಿಂಡಿ ತೀರ್ಥಗಳಿಗಿಂತ ನಗು ಮುಖದ ಮಾತುಗಳು ಪುಳಕ ನೀಡುತ್ತವೆ. ಉಂಡ ಎಲೆಗಳ ಅಥವಾ ತಟ್ಟೆಗಳ ಉಳಿಕೆ ವಸ್ತುಗಳ ಒಟ್ಟು ಮೊತ್ತವು ಇನ್ನೆರಡು ಮದುವೆಗಳಿಗೆ ಸಾಕು ಎನ್ನುವಷ್ಟರ ಮಟ್ಟಿನ ಆಡಂಬರದ ಊಟದ ವ್ಯವಸ್ಥೆಯ ಖರ್ಚುಗಳು, ಅನಗತ್ಯವಾಗಿ ತಿರುಗಾಡಲು ಬಳಸುವ ಕಾರು ಮೊದಲಾದ ವಾಹನಗಳ ಇಂಧನದ ಖರ್ಚುಗಳು, ಹೊಟ್ಟೆ ತುಂಬಿದ್ದರೂ ಪಂಚತಾರಾ ಹೊಟೆಲುಗಳಲ್ಲಿ ಸ್ವಲ್ಪ ಸವಿದು ಹೆಚ್ಚಿನದನ್ನು ಬಿಡುವುದಕ್ಕಾಗಿ ಮಾಡುವ ವೆಚ್ಚಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಈ ಪಟ್ಟಯು ಅತೀ ನೀಳವಾಗಿ ಯಾವುದೋ ದಾಖಲೆಗೆ ಸೇರಬಹುದು.
ನಾವು ದುಂದು ವೆಚ್ಚ ಮಾಡದೇ ಇರುವುದರಿಂದ ರಾಷ್ಟ್ರಕ್ಕೆ ಲಾಭ. ನಾವು ಮಾಡುವ ಖರ್ಚನ್ನು ಮಿತಿಗೊಳಿಸಿದರೆ ಉಂಟಾಗುವ ಉಳಿತಾಯ ನಮಗೆ ಪ್ರಯೋಜನಗಳನ್ನುಂಟು ಮಾಡುವುದರ ಜೊತೆಗೆ ರಾಷ್ಟ್ರದ ಆರ್ಥಿಕತೆಗೆ ಬೆಂಬಲವಾಗುತ್ತದೆ. ದುಂದು ವೆಚ್ಚ ಮಾಡದೆ ಇತರರಿಗೆ ಆ ವೆಚ್ಚದ ಉಳಿತಾಯದ ಬಾಬ್ತುಗಳು ತಲುಪುವಂತೆ ನೆರವಾದರೆ ಇನ್ನೊಂದು ಕುಟುಂಬವೂ ಅಲ್ಪ ಮಟ್ಟಿನ ನಿರಾಳತೆಯಿಂದ ಉಸಿರಾಡಲು ಅವಕಾಶ ಮಾಡಿ ಕೊಟ್ಟ ಪುಣ್ಯವೂ ದೊರೆಯುತ್ತದೆ. ತಿಪ್ಪೆಗೆಸೆದ ಭಕ್ಷ್ಯ ಭೋಜ್ಯಗಳ ಬದಲು ಸಾರ್ವಜನಿಕ ಪ್ರಯೋಜನಕ್ಕೆ ಸಿಗುವ ರಸ್ತೆ, ಮೋರಿ, ಮೆಟ್ಟಲು, ಕಟ್ಟಡಗಳ ಬಗ್ಗೆ ನಮ್ಮ ಹಣದ ವಿನಿಯೋಗವಾದರೆ ಅದೆಷ್ಟೋ ಮಂದಿಗೆ ಪ್ರಯೋಜನ ಮಾಡಿದ ಪುಣ್ಯವೂ ಬರುತ್ತದೆ. ಬಡ ಮಕ್ಕಳ ಹೊಟ್ಟೆ ಬಟ್ಟೆ, ಪುಸ್ತಕ, ಶಾಲಾ ಶುಲ್ಕಗಳಿಗೆ ದೊರೆತರೆ ಆ ಮಕ್ಕಳು ಜಾಣರಾಗಿ ರಾಷ್ಟ್ರದ ಹಿರಿಮೆಯನ್ನೆತ್ತರಿಸಲು ಕಾರಣವಾಗ ಬಹುದು. ನಾವು ಇಂತಹ ಯೋಜನೆಗಳನ್ನು ರೂಪಿಸುತ್ತಿದ್ದೇವೆಯೇ? ಯೋಚನೆಗಳನ್ನು ಮಾಡುತ್ತಿದ್ದೇವೆಯೇ? ಎಂಬುದಾಗಿ ನಮ್ಮನ್ನೇ ನಾವು ಪ್ರಶ್ನಿಸೋಣ. ದುಂದು ವೆಚ್ಚಕ್ಕೆ ಕಡಿವಾಣ ಹಾಕೋಣ.
ಲೇ: ರಮೇಶ ಎಂ ಬಾಯಾರು ಎಂ.ಎ; ಬಿಎಡ್
ರಾಜ್ಯ ಪ್ರಶಶ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು,
ಆಡಳಿತಾಧಿಕಾರಿಗಳು ಜನತಾ ಎಡುಕೇಷನ್ ಸೊಸೈಟಿ ಅಡ್ಯನಡ್ಕ