ಯಾದವ ಕುಲಾಲ್, ಬಿ.ಸಿ.ರೋಡ್
ಉದ್ದದ ಕೊಂಬಿನ, ಎತ್ತರವಾದ ಗಬ್ಬದ ಆಕರ್ಷಕ ನಡಿಗೆಯ ಬಸವ. ಕಳೆದ 10 ವರ್ಷಗಳಿಂದ ಅರ್ಕುಳ ಬೀಡಿನಲ್ಲಿ ಮಗೃಂತಾಯ ದೈವದ ನೇಮೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಇತ್ತು. ಸುಮಾರು 13 ವರ್ಷಗಳ ಹಿಂದೆ ರಾಘವೇಶ್ವರ ಸ್ವಾಮೀಜಿಯವರಲ್ಲಿ ಬಸವವೊಂದು ಬೇಕು ಎಂದು ಅರ್ಕುಳ ಬೀಡಿನವರು ಕೇಳಿದಾಗ ಅವರು ಗುಜರಾತಿನಿಂದ ಸುಮಾರು ತಳಿಗಳ ಕರುಗಳನ್ನು ಕರೆತಂದಾಗ ಅದರಲ್ಲಿ ಅರ್ಕುಳ ಬೀಡಿನವರಿಗೆ ಈ ಕರು ಇಷ್ಟವಾದ ಕಾರಣ ಅದನ್ನು ಸಾಗರದಿಂದ ಅರ್ಕುಳಕ್ಕೆ ತಂದರು. ಅದಕ್ಕೆ ಶಂಕರ ಎಂದು ನಾಮಕರಣ ಮಾಡಿದರು.
ಸುಮಾರು 3 ವರ್ಷಗಳ ಕಾಲ ಬೀಡಿನ ಮನೆಯಲ್ಲೇ ಇತ್ತು. ಅದರ ತರುವಾಯ ಅದನ್ನು ದೈವಸ್ಥಾನಕ್ಕೆ ದೈವದ ಬಸವನಾಗಿ ನೀಡಲಾಯಿತು. ದೈವಸ್ಥಾನದಿಂದ ಅದನ್ನು ಸಾಕುವುದಕ್ಕಾಗಿ ಉಳಿದೊಟ್ಟು ಮನೆಗೆ ಉಂಬಳಿ ನೀಡಲಾಗಿದೆ. ಪಾರಂಪರಿಕರವಾಗಿ ಅದನ್ನು ಅವರು ಸಾಕುತ್ತಾ ಬರುತ್ತಾ ಇದ್ದಾರೆ. ಈಗ ಶಂಕರನನ್ನು ಮನೋಜ್ ಉಳಿದೊಟ್ಟು ನೋಡಿಕೊಳ್ಳುತ್ತಿದ್ದರು. ಅದು ಹುಲ್ಲು, ಬೈಹುಲ್ಲನ್ನು ತಿನ್ನುವುದರ ಜೊತೆಗೆ ಅದಕ್ಕೆಂದೇ ವಿಶೇಷವಾಗಿ ಹಾಸನದಿಂದ ಜೋಳದ ಕಡ್ಡಿಯನ್ನು ತರಲಾಗುತ್ತಿತ್ತು.
ಸುಮಾರು 10 ವರ್ಷ ಪ್ರಾಯದವರಗೆ ಅದು ತುಂಬಾ ಒರಟು ಸ್ವಭಾವವನ್ನು ಹೊಂದಿದ್ದು, ಅದನ್ನು ನಿಯಂತ್ರಣದಲ್ಲಿಡಬೇಕಾದರೆ ಒಮ್ಮೊಮ್ಮೆ 3ರಿಂದ ನಾಲ್ಕು ಜನ ಬೇಕಾಗುತ್ತಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಅರ್ಕುಳ ಉಳ್ಳಾಕ್ಲು ಮಗೃಂತಾಯ ದೈವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ದೈವಕ್ಕೆ ದರ್ಶನ ಬರುವ ಸಂದರ್ಭದಲ್ಲಿ ಈ ಬಸವನಿಗೂ ದರುಶನ ಬಂದು ಆಮೇಲಿಂದ ಅದು ಸಾಧು ಸ್ವಭಾವವನ್ನು ಹೊಂದಿತು.
ಪೊಳಲಿ ಬ್ರಹ್ಮಕಲಶದಿಂದ ಪ್ರಸಿದ್ಧಿ :
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ಅರ್ಕುಳ ಬೀಡಿನಿಂದ ಮಗೃಂತಾಯ ದೈವದ ಭಂಡಾರ ಪೊಳಲಿಗೆ ಬರುವ ಸಂದರ್ಭದಲ್ಲಿ ಈ ಬಸವನನ್ನೂ ಕೂಡಾ ಶೃಂಗಾರ ಮಾಡಿ ಟೆಂಪೋದಲ್ಲಿ ಕರೆತರಲಾಯಿತು. ಆಮೇಲೆ ಸುಮಾರು ಒಂದೂವರೆ ಕಿಲೋಮೀಟರ್‌ನಷ್ಟು ಕಾಲ್ನಡಿಗೆಯಲ್ಲಿ ಅದು ಪೊಳಲಿಗೆ ಆಗಮಿಸಿತು. ಬ್ರಹ್ಮಕಲಶೋತ್ಸವದಲ್ಲಿ ಅದೇ ಆಕರ್ಷಣೆಯ ಕೇಂದ್ರವಾಗಿತ್ತು. ಸುಮಾರು 7 ದಿನಗಳವರೆಗೆ ಪೊಳಲಿಯಲ್ಲಿಯೇ ನೆಲೆಸಿತ್ತು. ಎಲ್ಲರೂ ಬಸವನನ್ನು ನೋಡಲೇಂದೇ ಕಾಯುತ್ತಾ ಇದ್ದರು. ಅದರೊಂದಿಗೆ ಸೆಲಿ ತೆಗೆದು ಸಂಭ್ರಮಿಸಿದವರೂ ಸಹಸ್ರಾರು ಜನ. ಅದು ಜನರನ್ನು ಮುಟ್ಟಲು ಕೂಡ ಬಿಡುತ್ತಿದ್ದರಿಂದ ಅದು ಎಲ್ಲರ ಮನಸ್ಸನ್ನು ಸೆಳೆಯಿತು. ಎಲ್ಲರ ಮನಸೆಳೆದಿದ್ದ ಈ ಬಸವ ಆದಿತ್ಯವಾರ ಅಸೌಖ್ಯದಿಂದ ಕೊನೆಯುಸಿರೆಳೆಯಿತು.
***
ನಮ್ಮ ಬೀಡಿನಲ್ಲಿದ್ದ ಶಂಕರ ನಮಗೆಲ್ಲ ಅಚ್ಚುಮೆಚ್ಚಾಗಿತುತ್ತು. ಪೊಳಲಿ ಬ್ರಹ್ಮಕಲಶದ ನಂತರವಂತೂ ಅದು ಸೆಲೆಬ್ರಿಟಿಯಾಗಿತ್ತು. ಎಲ್ಲರೂ ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಅದನ್ನು ನೋಡಿದರೆ ಹೆದರುತ್ತಿದ್ದ ಜನರು ಕೂಡಾ ಆಮೇಲಿಂದ ಅದನ್ನು ಮುಟ್ಟಿ ಸಂತೋಷ ಪಡುತ್ತಿದ್ದರು.
ಡಾ. ಅಜಯ ಕುಮಾರ್ ಶೆಟ್ಟಿ, ಅರ್ಕುಳ ಬೀಡು