– ಯಾದವ ಕುಲಾಲ್
ಬಿ.ಸಿ.ರೋಡ್ : ಕಬ್ಬಿಣದ ತಗಡಿನಿಂದ ನಿರ್ಮಾಣವಾದ ಹೆದ್ದಾರಿ ಪ್ರಾಧಿಕಾರದ ಟೋಲ್ ಸಂಗ್ರಹಣಾ ಕೇಂದ್ರದ ಶೌಚಾಲಯದ ಸುತ್ತಮುತ್ತ ಪೊದೆಯಿಂದ ತುಂಬಿ ಹೋಗಿದ್ದು ಮಾತ್ರವಲ್ಲದೆ ತಗಡಿನ ಶೀಟು ಪೂರ್ತಿ ತುಕ್ಕು ಹಿಡಿದು ಹೋಗಿದೆ. ಇದು ಬ್ರಹ್ಮರಕೂಟ್ಲುವಿನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಂಗ್ರಹಣಾ ಕೇಂದ್ರದ ಬಳಿ ಪ್ರಯಾಣಿಕರಿಗೆ ಹಾಗೂ ಟೋಲ್ ಸಂಗ್ರಹಣೆ ಮಾಡುವ ಸಿಬ್ಬಂದಿಗಳಿಗೆ ಇರುವ ಶೌಚಾಲಯ. ಆದರೆ ಇದರ ಒಳಗೆ ಬಿಡಿ, ಹತ್ತಿರ ಹೋಗಲೂ ಅಸಹ್ಯವಾಗುತ್ತದೆ. ಪರಿಸರವಿಡೀ ದುರ್ನಾತದಿಂದ ಕೂಡಿದ್ದು ಇನ್ನೊಂದು ಕಡೆಯಿಂದ ಸೊಳ್ಳೆಗಳ ಹಾವಳಿ. ಮಾರಕ ರೋಗಗಳ ಉತ್ಪತ್ತಿಯ ತಾಣದಂತಾಗಿದೆ ಈ ಪರಿಸರ. ರೋಗ ಉತ್ಪತ್ತಿಗೂ ನಾವೇ ಮೂಲ ಕಾರಣರಾಗುತ್ತಿದ್ದೇವೆ.
ಬಹಿರ್ದೆಸೆಗೆ 3 ಕಿ.ಮೀ ದೂರ ಓಡುವ ಪರಿಸ್ಥಿತಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪ್ಲಾಜಾದಲ್ಲಿ ಲಕ್ಷಗಟ್ಟಲೆ ಹಣ ವಸೂಲಾತಿ ಮಾಡಿದರೂ, ಈ ರಸ್ತೆಯಲ್ಲಿ ಹೋಗುವ ಪ್ರಯಾಣಿಕರಿಗ ನಯಾ ಪೈಸೆ ಖರ್ಚು ಮಾಡವುದಿಲ್ಲ. ರಾತ್ರಿ ಹಗಲೆನ್ನದೆ ವಾರದ ಏಳು ದಿನವೂ ವಸೂಲಾತಿ ನಡೆಯುತ್ತಿದೆ. ಆದರೆ ವಸೂಲಿ ಮಾಡುವ ಕಾರ್ಮಿಕರ ಬಗ್ಗೆ ಮಾತ್ರ ಎಳ್ಳಷ್ಟೂ ಗಮನವಿಲ್ಲ. ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿರು ತಮ್ಮ ಬಹಿರ್ದೆಸೆಗಾಗಿ ಬಿ.ಸಿ.ರೋಡಿನ ಬಸ್ಸು ನಿಲ್ಧಾಣದ ಪಕ್ಕದಲ್ಲಿರುವ ಶೌಚಾಲಯಕ್ಕೋ, ಇಲ್ಲವೇ ಕಳ್ಳಿಗೆ ಗ್ರಾಮದ ಯಾವುದಾದರೊಂದು ಮನೆಗೋ ಹೋಗಬೇಕಾದ ಪರಿಸ್ಥಿತಿ ದಿನಂಪ್ರತಿ ಅನುಭವಿಸುತ್ತಿದ್ದಾರೆ.
ಯಾರ ಗಮನಕ್ಕೂ ಬಾರದ ಶೌಚಾಲಯ : ಶೌಚಾಲಯ ನಿರುಪಯುಕ್ತವಾಗಿ ವರ್ಷಗಳೆರಡು ಕಳೆದಿದೆ. ಈ ಶೌಚಾಲಯ ದುಸ್ಥಿತಿ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆದ್ದಾರಿ ರಸ್ತೆಯಲ್ಲಿಯೇ ಹಾದುಹೋಗುವುದರಿಂದ ಅವರ ಗಮನಕ್ಕೆ ಬಂದಿಲ್ಲ.. ಟೋಲ್ ಸಂಗ್ರಹಣೆ ಮಾಡಲು ಗುತ್ತಿಗೆ ವಹಿಸಿಕೊಂಡ ಸಂಸ್ಥೆಯೂ ತನ್ನ ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ವಹಿಸದೇ ಇರುವುದು ವಿಪರ್ಯಾಸವೇ ಸರಿ. ಬ್ರಹ್ಮರಕೂಟ್ಲು ಸರ್ವೀಸ್ ರಸ್ತೆಯ ಬದಿಯಲ್ಲಿರುವ ಈ ಶೌಚಾಲಯದ ಹತ್ತಿರವೇ ವಿಶ್ರಾಂತಿ ಕೊಠಡಿ ಇದ್ದು ಅದೂ ಕೂಡಾ ಸಮರ್ಪಕವಾಗಿಲ್ಲ. ಇವೆರಡೂ ಕಬ್ಬಿಣದ ತಗಡಿನಿಂದ ಕೂಡಿದ್ದು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಮೇಲೋ ಅಥವಾ ಯಾವುದೋ ವಾಹನಗಳ ಮೇಲೆಯೋ ಬೀಳುವ ಅಂದಾಜಿನಲ್ಲಿದೆ.
ಮಳೆ ಬಿಸಿಲೆನ್ನದೆ ಹಗಲು-ರಾತ್ರಿ ಕೆಲಸ ಮಾಡುವ ಈ ಕಾರ್ಮಿಕರಿಗೆ ಅವರ ಮೂಲಭೂತ ಅಗತ್ಯವಾದ ಶೌಚಾಲಯದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಡುವಲ್ಲಿ ಗುತ್ತಿಗೆ ಸಂಸ್ಥೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯು ಗಮನಹರಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆಯೂ ಇತ್ತ ಒಮ್ಮೆ ಗಮನ ಹರಿಸಬೇಕಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಡೆಂಗ್ಯೂ, ರೋಗ ಆವರಿಸಿತ್ತು. ಈ ಸಂದರ್ಭದಲ್ಲಿ ಇಲ್ಲಿರುವ ಕೊಳಕು ಪರಿಸರದಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂದ ಪಟ್ಟ ಇಲಾಖೆಯವರು ಆದಷ್ಟು ಶೀಘ್ರವಾಗಿ ಈ ಕುರಿತು ಗಮನಹರಿಸಿ, ಶೌಚಾಲಯವನ್ನು ಸಮರ್ಪಕವಾಗಿಸುವುದರ ಜೊತೆಗೆ ಪರಿಸರದ ಸ್ವಚ್ಛತೆಯ ಬಗ್ಗೆ ಗಮನ ಹರಿಸಿದರೆ ಕಾರ್ಮಿಕರ ಜೊತೆಗೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವಾದೀತು.
*****
ಟೋಲ್‌ಗೇಟ್ ವ್ಯಾಪ್ತಿ ಕಳ್ಳಿಗೆ ಪಂಚಾಯತ್ ಗೆ ಬರುತ್ತದೆ. ಆದರೆ ನಮ್ಮ ಪಂಚಾಯತ್‌ಗೆ ಈ ಬಗ್ಗೆ  ಯಾವುದೇ ಮಾಹಿತಿ ಬಂದಿಲ್ಲ. ಅಲ್ಲಿನ ದುಸ್ಥಿತಿ ಬಗ್ಗೆ ಸ್ಥಳೀಯರು ದೂರು ನೀಡಿದಲ್ಲಿ ಪಂಚಾಯತ್‌ನಿಂದ ಟೋಲ್ ವಸೂಲಿ ಗುತ್ತಿಗೆದಾರ ಸಂಸ್ಥೆಗೆ ನೋಟೀಸು ನೀಡಲಾಗುವುದು. ಪರಿಸರದ ಕಾಳಜಿ ನಮ್ಮಲಿಯೂ ಇದೆ.
– ಮಾಲಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಳ್ಳಿಗೆ ಪಂಚಾಯತ್
***
ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಟೋಲ್ ಸಂಗ್ರಹಣಾ ಸಂಸ್ಥೆ ಸರ್ವೀಸ್ ರಸ್ತೆಯಲ್ಲಿ ಕಾಟಾಚಾರಕ್ಕೆ ಶೌಚಾಲಯದಿಂದ ನಿರ್ಮಿಸಿದ ಕಾರಣ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಬರುವ ಭೀತಿ ಇದೆ. ಸ್ಥಳೀಯ ಪಂಚಾಯತ್ ಗಳೂ, ಟೋಲ್‌ಸಂಗ್ರಹಣೆ ಮಾಡುವ ಗುತ್ತಿಗೆದಾರ ಸಂಸ್ಥೆಯಾಗಲೀ ಇದರ ಗಮನ ಹರಿಸಲಿ.
– ದಿನೇಶ್, ಸ್ಥಳೀಯ ನಿವಾಸಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here