ಬಂಟ್ವಾಳ: ಅಮಾಯಕರನ್ನು ಭಯೋತ್ಪಾದಕರನ್ನಾಗಿಸುವ ಕೆಲವು ಮಾಧ್ಯಮ ಭಯೋತ್ಪಾದನೆಯ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಸಮಿತಿ ವತಿಯಿಂದ ಶುಕ್ರವಾರ ಸಂಜೆ ಬಿ.ಸಿ.ರೋಡ್‌ನ ಕೈಕಂಬ ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅವರು ದುವಾ: ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ, ಮಿತ್ತಬೈಲ್ ಮಸೀದಿಯ ಖತೀಬ್ ಅಶ್ರಫ್ ಫೈಝಿ ಉದ್ಘಾಟನಾ ಭಾಷಣ ಮಾಡಿದರು.
ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯದ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿ, ದೇಶಾದ್ಯಂತ ಸಮಾನತೆ, ಐಕ್ಯತೆಗಾಗಿ ಜನರು ಪಣತೊಡುತ್ತಿರುವಾಗ ಕೋಮುಶಕ್ತಿಗಳು ಪ್ರಜಾಪ್ರಭುತ್ವ ಬುಡಮೇಲು ಹುನ್ನಾರಕ್ಕೆ ಕೈಹಾಕುತ್ತಿವೆ. ಇದು ಅಪಾಯಕಾರಿ. ಭಯೋತ್ಪಾದನೆಯ ಹೆಸರಿನಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಧರ್ಮ, ಧರ್ಮಗಳ ನಡುವೆ ಕಂದಕವನ್ನು ಸೃಷ್ಠಿಸಲಾಗುತ್ತಿರುವುದು ಖಂಡನೀಯ. ಇದರ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ಹೋರಾಟ ನಿರಂತರವಾಗಲಿದೆ ಎಂದು ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಶಾ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಗೋವಿಂದೂರು ನಿವಾಸಿ, ಧರ್ಮಗುರು ಅಬ್ದುಲ್ ರವೂಫ್ ಅವರನ್ನು ಕೆಲವೊಂದು ಕನ್ನಡ ಸುದ್ದಿವಾಹಿನಿಗಳು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿ ಅವರನ್ನು ಸಮಾಜದ ಮುಂದೆ ಭಯೋತ್ಪಕರೆಂದು ಬಿಂಬಿಸುವ ಪ್ರಯುತ್ನ ಮಾಡಿದೆ. ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಪೂರ್ವಗ್ರಹ ಪೀಡಿತ ವರದಿಗಳು ಬಿತ್ತರಿಸಿ ಸಮುದಾಯದ ಜನರಲ್ಲಿ ಅಭದ್ರತಾ ಮನೋಭಾವವನ್ನು ಸೃಸ್ಟಿಸುತ್ತಿದೆ. ಈ ಸಮಾಜಕ್ಕೆ ಸತ್ಯಾಸತ್ಯತೆಯ ಸಂದೇಶವನ್ನು ರವಾನಿಸಬೇಕಿದ್ದ ಮಾಧ್ಯಮಗಳು ಇಂದು ಸಾಮಾಜಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಮಾತ್ರವಲ್ಲ ಅಮಾಯಕರನ್ನು ಭಯೋತ್ಪಾದಕರಾಗಿ ಚಿತ್ರೀಕರಿಸುತ್ತಿರುವುದು ಖೇದಕರ ಎಂದರು.
ಸುಳ್ಳು ಸುದ್ದಿ ಪ್ರಕಟಿಸಿದ ಸುದ್ದಿ ವಾಹಿನಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸದೇ ಇದೀಗ ಯೂಟ್ಯೂಬ್‌ನಲ್ಲಿದ್ದ ವೀಡಿಯೋ ಡಿಲಿಟ್ ಮಾಡಿದೆ. ಎಸ್ಕೆಎಸ್ಸೆಸ್ಸೆಫ್ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಯ ಮೂಲಕ ಹೋರಾಟ ಹಮ್ಮಿಕೊಂಡಿದ್ದು, ಮಾಧ್ಯಮಗಳು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದ ಅವರು, ಜಿಲ್ಲೆಯ ಸೌಹಾರ್ದವನ್ನು ಕೆಡಿಸುತ್ತಿರುವ ಇಂತಹ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಪ್ರತಿಭಟನೆಯ ಬಳಿಕ ಬಂಟ್ವಾಳ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕೇಂದ್ರ ಸಮಿತಿ ಸದಸ್ಯ ಬಶೀರ್ ಮಜಲ್, ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಸಮಿತಿ ಉಪಾಧ್ಯಕ್ಷ ಅಲ್ತಾಫ್ ಮಿತ್ತಬೈಲ್, ಪ್ರಮುಖರಾದ ಹಾರೂನ್ ರಶೀದ್, ಬಂಟ್ವಾಳ ಮಸೀದಿ ಮುದರ್ರಿಸ್ ಉಸ್ಮಾನ್ ಪೈಝಿ, ಶೇಖ್ ಮುಹಮ್ಮದ್ ಇರ್ಫಾನಿ, ವಲಯ ಸಮಿತಿ ಸದಸ್ಯ ಸತ್ತಾರ್ ಕೌಸರಿ, ಶಾಕೀರ್ ಶಾಂತಿಯಂಗಡಿ, ಪ್ರಧಾನ ಕಾರ್ಯದರ್ಶಿ ಟಿ.ಎಂ ಹನೀಫ್ ತಾಳಿಪಡ್ಪು, ಮುಹಮ್ಮದ್ ಶರೀಫ್, ಸಲಾಂ, ಸಮದ್ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಸಿರಾಜುದ್ದೀನ್ ಫೈಝಿ ವಂದಿಸಿ, ಮುಹಮ್ಮದ್ ಖಲಂದರ್ ತುಂಬೆ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here