ಬಂಟ್ವಾಳ: ರಾತ್ರಿಹೊತ್ತಲ್ಲಿ ಮನೆಗೆ ನುಗ್ಗಿ ಮನೆಯ ಯಜಮಾನನಿಗೆ ಕತ್ತಿಯಿಂದ ತಲೆಗೆ ಹೊಡೆದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮಂಗಳೂರು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡದ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕಿನ ಬಿಮೂಡ ಗ್ರಾಮದ ಮೊಡಂಕಾಪು ಕಾರ್ಮೆಲ್ ಕಾಲೇಜು ಬಳಿಯಲ್ಲಿರುವ ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿ ರಾಬರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಳಾದ ಪ್ರವೀಣ್ ಹೊಸನಗರ ಹಾಗೂ ಸಂಜು ವಿರಾಜಪೇಟೆ ಅವರಿಗೆ ಮಂಗಳೂರು ನ್ಯಾಯಲಯವು ಶಿಕ್ಷೆ ವಿಧಿಸಿದೆ.
ಘಟನೆಯ ವಿವರ:
ಕಳೆದ ವರ್ಷ ಅಗಸ್ಟ್ 8 ರಂದು ರಾತ್ರಿ 9.30 ಗಂಟೆಯ ವೇಳೆ ಜನಾರ್ದನ ಹೊಳ್ಳ ಅವರು ಮನೆಯಲ್ಲಿ ಟಿ.ವಿ ನೋಡುತ್ತಿರುವ ಸಂದರ್ಭದಲ್ಲಿ ಮನೆಯ ಬೆಲ್ ಹೊಡೆದ ಶಬ್ದವಾಯಿತು.
ಜನಾರ್ದನ ಅವರು ಯಾರು ಅಂತ ನೋಡಲು ಬಾಗಿಲು ಚಿಲಕ ತೆರೆದಾಗ ಇಬ್ಬರು ಅಪಚಿರಿತ ವ್ಯಕ್ತಿಗಳು ಇವರನ್ನು ಕುತ್ತಿಗೆಗೆ ಕೈಹಾಕಿ ಮನೆಯೊಳಗೆ ದೂಡಿ ಹಾಕಿದರು.
ಬಳಿಕ ಕುತ್ತಿಗೆ ಹಿಡಿದು ಬಾಯಿ ಮುಚ್ಚು , ಕುತ್ತಿಗೆಗೆ ಯಲ್ಲಿದ್ದ ಚಿನ್ನದ ಸರ ಕೊಡು ಇಲ್ಲದಿದ್ದರೆ ಕೊಲ್ಲುತ್ತೇವೆ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ ಮೂರು ಪವನ್ 75 ಸಾವಿರ ಮೌಲ್ಯದ ಚಿನ್ನದ ಸರವನ್ನು ಬಲತ್ಕಾರವಾಗಿ ಎಳೆದುಕೊಂಡರು, ಅವೇಳೆ ಹೊಳ್ಳ ಅವರ ಕುತ್ತಿಗೆ ಹಾಗೂ ತಲೆಗೆ ಗಾಯವಾಗಿತ್ತು.
ನೆಲಕ್ಕೆ ಬಿದ್ದ ಹೊಳ್ಳ ಅವರು ಜೋರಾಗಿ ಕಿರುಚಿದಾಗ ಸ್ನಾನ ಗೃಹದಲ್ಲಿದ್ದ ಇವರ ಪತ್ನಿ ಮನೆಯೊಳಗೆ ಬಂದು
ನೋಡಿದಾಗ ಕಳವು ಮಾಡಿದ ವಿಷಯ ಬೆಳಕಿಗೆ ಬಂತು.
ಅಷ್ಟು ಹೊತ್ತಿಗಾಗಲೇ ಕೊಣೆಯಲ್ಲಿ ಹುಡುಕಾಟ ನಡೆಸುತ್ತಿದ್ದ ಆರೋಪಿಗಳು ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ ಕುತ್ತಿಗೆಗೆ ಮತ್ತು ತಲೆಗೆ ಗಾಯಗೊಂಡು ರಕ್ತ ಸುರಿಯುತ್ತಿದ್ದ ಹೊಳ್ಳ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಶಿವಮೊಗ್ಗ ರವರು ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಶ್ರೀ ಪುಷ್ಪರಾಜ್ ಅಡ್ಯಂತಾಯ, ರಾಜು ಪೂಜಾರಿ ರವರು ವಾದಿಸಿದ್ದರು. ಉತ್ತಮ ತನಿಖೆ ಮತ್ತು ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷ್ಯ ದಿಂದ ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮಾರ್ಗದರ್ಶನದಂತೆ ಬಂಟ್ವಾಳ ನಗರ ರಾಣಾ ಎಸ್.ಐ ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಎಸ್.ಐ.ಹರೀಶ್ ಅವರು ಆರೋಪಿಗಳನ್ನು 2018 ಅಗಸ್ಟ್ 27 ರಂದು
ಬಂಧಿಸಿದ್ದರು.