ಬಂಟ್ವಾಳ, ಆ. ೨೯: ಈಗಾಗಲೇ ತಾಲೂಕಿನಲ್ಲಿ ೫೦೭ ನೆರೆಪೀಡಿತ ಮನೆಗಳಿಗೆ ತಲಾ ೧೦ ಸಾವಿರ ರೂ.ವಿನಂತೆ ಪರಿಹಾರ ಧನ ವಿತರಣೆ ಮಾಡಲಾಗಿದೆ. ಮಳೆ ಹಾನಿ ಸಂಬಂಧಿಸಿದ ಪ್ರಕರಣದ ವರದಿಯನ್ನು ಸಿದ್ದಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರು ಗುರುವಾರ ಬಂಟ್ವಾಳ ತಾಲೂಕು ಪಂಚಾಯತ್‌ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಳೆಹಾನಿಯ ಬಗ್ಗೆ ಮಾಹಿತಿ ನೀಡಿದ ತಹಶೀಲ್ದಾರ್, ೯ ಮನೆಗಳು ಪೂರ್ಣಹಾನಿ, ೪೦ ಮನೆಗಳು ಭಾಗಶಃ ಹಾನಿ, ೫೦ರಷ್ಟು ಮನೆಗಳು ಶೇ.೨೫ರಷ್ಟು ಹಾನಿಯಾಗಿವೆ ಎಂದು ವರದಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿ ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ, ಮಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿ ಕರೋಪಾಡಿ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಮನೆಯೊಂದು ಹಾನಿಯಾಗಿದ್ದು, ಈ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರಧನ ವಿತರಣೆಯಾಗದ ಕುರಿತು ತಿಳಿಸಿದಾಗ, ಪೂರ್ಣ ಹಾನಿಯಾದ ಮನೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಿದ್ದಲ್ಲದೆ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಪರಿಹಾರಕ್ಕಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಲಾಗಿದೆ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು.
ಭಾರೀ ಮಳೆಯಿಂದಾಗಿ ತಾಲೂಕಿನಲ್ಲಿ ೭ ದಿನಗಳ ಕಾಲ ನೀಡಲಾದ ಶಾಲಾ ರಜೆಗಳನ್ನು ಸರಿದೂಗಿಸಲು ೧೬ ಶನಿವಾರವೂ ಪೂರ್ಣ ಹೊತ್ತು ತರಗತಿ ನಡೆಸಲಾಗುವುದು. ರವಿವಾರ ಸಹಿತ ಸರಕಾರಿ ರಜಾ ದಿನದಂದು ತರಗತಿ ನಡೆಸುವುದಿಲ್ಲ ಶಿಕ್ಷಣಾಧಿಕಾರಿ ಅವರು ಸ್ಪಷ್ಟಪಡಿಸಿದರು. ಈ ಬಗ್ಗೆ ತಾಲೂಕಿನ ಎಲ್ಲ ಶಾಲೆಗಳಿಗೆ ಸುತ್ತೋಲೆ ನೀಡಲಾಗಿದೆ.
ನೆಟ್ಲಮುಡ್ನೂರು ವಿದ್ಯುತ್ ಕಂಬಗಳ ಸ್ಥಳಾಂತರ, ಕರೋಪಾಡಿ ವ್ಯಾಪ್ತಿಯ ವಿದ್ಯುತ್ ಪರಿವರ್ತಕ ಅಳವಡಿಸುವ ಕುರಿತು ಪಾಲನಾ ವರದಿಯಲ್ಲಿ ಉತ್ತರವನ್ನು ಉಲ್ಲೇಖಿಸದ ಬಗ್ಗೆ ತಾಪಂ ಸದಸ್ಯರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾಲೂಕಿನಲ್ಲಿ ೮೨ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಕೂಡ ಗುಣಮುಖರಾಗಿ ಆರೋಗ್ಯದಿಂದ ಮನೆಯಲ್ಲಿದ್ದಾರೆ. ಯಾರು ಕೂಡ ಡೆಂಗ್‌ನಿಂದ ಸಾವನ್ನಪ್ಪಿರುವ ಪ್ರಕರಣ ದಾಖಲಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ಪಷ್ಟಪಡಿಸಿದರು. ಗುಜಿರಿ, ಟಯರ್ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ರಾಶಿಯಾಗುವುದರಿಂದ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಈ ಬಗ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಡಾ. ದೀಪಾ ಅವರು ಸಭೆಗೆ ತಿಳಿಸಿದರು.
ಈ ಬಾರಿಯ ಮಳೆಯಿಂದಾಗಿ ತಾಲೂಕಿನ ೬೮ ಹಿರಿಯ ಪ್ರಾಥಮಿಕ ಹಾಗೂ ೧೩ ಪ್ರೌಢಶಾಲೆಯ ಕಟ್ಟಡಗಳಿಗೆ ಹಾನಿ ಸುಮಾರು ೨.೮೩ ಕೋ.ರೂ. ನಷ್ಟ ಸಂಭವಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸಭೆಗೆ ತಿಳಿಸಿದರು.
ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿ ಅರ್ಜಿದಾರರು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯ ಉಸ್ಮಾನ್ ಸಭೆಯ ಗಮನ ಸೆಳೆದರು.
ತಾಪಂ ಸದಸ್ಯ ಆದಂ ಕುಂಞಿ, ತೋಟಗಾರಿಕಾ ಇಲಾಖೆಯಿಂದ ಕಳೆದ ವರ್ಷದ ಕೊಳೆರೋಗದ ಹಣವೇ ಬರಲಿಲ್ಲ ದೂರಿಕೊಂಡರೆ, ಮೆಸ್ಕಾಂ ಬಿಲ್‌ನ ಕೂಡಿಸುವಾಗ ಮೊತ್ತದಲ್ಲಿ ವ್ಯತ್ಯಾಸದ ಕಂಡುಬರುತ್ತಿದೆ. ಜನಸಾಮಾನ್ಯರು ಇದನ್ನು ಗಮನಿಸದೇ ಬಿಲ್ ಮೊತ್ತವನ್ನು ಪಾವತಿಸುತ್ತಿದ್ದಾರೆ ಎಂದು ತಾಪಂ ಸದಸ್ಯ ಹೈದರ್ ಕೈರಂಗಳ ಸಭೆಗೆ ತಿಳಿಸಿದರು.
ಶ್ರದ್ಧಾಂಜಲಿ: ಕೇಂದ್ರ ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಹಿನ್ನೆಲೆಯಲ್ಲಿ ತಾಪಂ ಸದಸ್ಯ ಪ್ರಭಾಕರ ಪ್ರಭು ಮೌನ ಪ್ರಾರ್ಥನೆಯ ಕುರಿತು ವಿಷಯ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಭೆ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.
ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿದ್ದರು. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here