


ಕಿಚ್ಚನೆಲ್ಲ ಎದೆಯಲಿಟ್ಟು
ನಕ್ಕು ನಲಿವೆ ಅನುದಿನ!
ಬೆಚ್ಚನೆಯ ಒಲವ ಸವಿಗೆ
ತುಡಿಯುತಿರುವೆ ದಿನ ದಿನ!
ಬೆಡಗು ತಾನೆ ಅಡಗುವುದು
ನಿನ್ನ ಒಲವೆ ಸೋನೆಗೆ
ತೋಳಬಂದಿ ಮನಸುದುಂಬಿ
ಉರಿಸು ಮಿಲನ ದೀವಿಗೆ
ಮೌನದೆದೆಗೆ ಮದನ ಬಾಣ
ನಾಟಿ ನಾಚಿ ಮಣಿದಿದೆ
ಮಾತಿನರಳು ತಿಳಿಯದೇನೆ
ರತಿಯ ಮನವು ದಣಿದಿದೆ
ಗಾಳಿಯಂಚ ಸೆರಗ
ತುಂಬ ನಿನ್ನ ನಗೆಯ ಮಲ್ಲಿಗೆ!
ಬಾನ ಎದೆಯ ತುಂಬ ಸುರಿದು
ನಲಿದು ಬಿಡು ಮೆಲ್ಲಗೆ!
ಕೊಳಲ ಬಿಟ್ಟು ಕೊರಳ ಬಳಸು
ಕಾಯುತಿದೆ ಮೈ ಮನ!
ಮುರಿದು ಎಸೆವೆ ನೋಡು ಇನ್ನು
ಬೇಯುತಿರುವೆ ಪ್ರತಿ ದಿನ!
#ನೀ.ಶ್ರೀಶೈಲ ಹುಲ್ಲೂರು


