


ಬೀದಿನಾಯಿ ಸಣ್ಣದೊಂದು ಬಿಲವ ಹುಡುಕಿತು,
ಗುಂಡಿ ಮಾಡಿ ಮೂರು ಪುಟ್ಟ ಮರಿಯ ಹಾಕಿತು.
ದಿನವೂ ಬಾಯಿಯಲ್ಲಿ ಅನ್ನ ತಂದು ಕೊಟ್ಟಿತು,
ಅಲೆದು ಎಲ್ಲೋ ಸಿಕ್ಕ ಊಟ ತಂದು ಬಡಿಸಿತು..
ಎರಡು ಗಂಡು ಮರಿಯ ಬಂದ ಜನರು ಕೊಂಡು ಹೋದರು,
ಹೆಣ್ಣು ಮರಿಯ ಅಲ್ಲೆ ಬಿಟ್ಟು ಸಾಗುತ್ತಿದ್ದರು..
ಹೊರಗೆ ಹೋದ ತಾಯ ಮೇಲೆ ಕಾರು ಹರಿಯಿತು,
ಊಟ, ಹಾಲು ಇಲ್ಲದೇನೆ ಮರಿ ಹೊರಗೆ ಹೊರಟಿತು..
ಅಲ್ಲಿ ಇಲ್ಲಿ ಹೋಗಿ ತಾನು ತಾಯ ಹುಡುಕಿತು,
ತಾಯಿ ಕಾಣದಿರಲು ಮನದಿ ಬಹಳ ನೊಂದಿತು,
ಹೊಟ್ಟೆ ಹಸಿವು ತಡೆಯದಾಗಿ ನೋವನುಂಡಿತು,
ದಾರಿಯಲ್ಲಿ ಕೂಗುತಲಿ ನಡೆಯುತ್ತಿದ್ದಿತು..
ದೂರದಲಿ ಒಂದು ನಾಯ ಕಂಡು ಹಿಗ್ಗಿತು,
ತನ್ನ ತಾಯಿಯೆಂದೆ ಅದರ ಬಳಿಗೆ ಸಾರಿತು!
ಕೋಪಗೊಂಡ ಗಂಡು ನಾಯಿ ಕಚ್ಚಿಬಿಟ್ಟಿತು,
ನೋವನ್ನೆಲ್ಲ ಸಹಿಸದಾಗಿ ಓಟಕಿತ್ತಿತು!
ಅಲ್ಲೆ ಬಂತು ಮೋಟಾರ್ ಬೈಕು ಅದರತ್ತ ಸಾಗುತಲಿ,
ಪುಟ್ಟ ಮರಿಯು ಕೂಗುತಿತ್ತು ನೋವಿನಿಂದಲಿ,
ಆತುರದ ಮನುಜನವನು ವೇಗದಿಂದಲಿ,
ಹರಿಸಿದನು ಗಾಡಿಯನು ಮರಿಯ ಮೇಲೆಯೇ..
ತನ್ನ ಜೀವ ಕಳೆದುಕೊಂಡು ಮರಿಯು ಸತ್ತಿತು,
ಬುವಿಗೆ ಬಂದು ನಾಲ್ಕು ದಿನದ ನರಕ ನೋಡಿತು!
ಜೀವಿಗಳ ಬದುಕ ಪಾಡು ಕಷ್ಟ ಅಲ್ಲವೇ..
ದಯೆ, ಕರುಣೆ, ಸಹಾಯವನ್ನು ನೀಡಬಲ್ಲೆವೇ?
@ಪ್ರೇಮ್@


