ಬಂಟ್ವಾಳ, ಆ.೨೯: ಇಲ್ಲಿನ ಬಿ.ಸಿ.ರೋಡ್ ನಿವಾಸಿ, ಲೇಖಕ ಪ. ರಾಮ ಶಾಸ್ತ್ರಿ (೮೯) ಅವರು ಆ.೨೯ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಮೃತರ ಇಚ್ಛೆಯಂತೆ ಕೆಎಂಸಿಗೆ ದೇಹದಾನ ಮಾಡಲಾಗಿದೆ.
ಇವರು ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರ ಹಿರಿಯ ಸಹೋದರ.

ಪರಮಾನಂದ ಎಂಬ ಕಾವ್ಯನಾಮದಲ್ಲಿ ಸಾಹಿತ್ಯಲೋಕದಲ್ಲಿ ಆಪ್ತವಾದ ಬರಹಗಳನ್ನು ಬರೆದವರು. ಒಂದು ಕಾಲದ ಶ್ರೇಷ್ಠ ಕತೆಗಾರರು.  ೧೯೫೦-೬೦ರ ದಶಕದಲ್ಲಿ ಹೃದಯಸ್ಪರ್ಶಿಯಾದ ಸಾಂಸಾರಿಕ ಕತೆಗಳ ಮೂಲಕ ಓದುಗರ ಹಾಗೆಯೇ ವಿಮರ್ಶಕರ ಮನ ಗೆದ್ದ ಅವರು ಅನಂತರದ ಕಾಲದಲ್ಲಿ ಬರೆದರೂ ಪ್ರಕಟಿಸುವ ಗೋಜಿಗೇ ಹೋಗಿರಲಿಲ್ಲ. ಈ ರಡು ವರ್ಷದಲ್ಲಿ ಅವರ ಅಜ್ಜನೆಂಬ ಅರಳಿ ಮರ, ಪರಮಾನಂದರ ಕಥಾಸಂಗಮ, ಮಾಂತ್ರಿಕಶಕ್ತಿ ಎಂಬ ಪುಸ್ತಕಗಳು ಪ್ರಕಟವಾದವು.
ಪಟಿಕ್ಕಲ್ಲು ರಾಮಶಾಸ್ತ್ರಿ ಅವರು ಬಂಟ್ವಾಳ ತಾಲೂಕಿನ ಪುಣಚದ ಬಳಿಯಲ್ಲಿ ೧೯೩೧ರ ಜ.೩೦ರಂದು ಜನಿಸಿದರು. ಅವರು ಎಳೆಯ ವಯಸ್ಸಿನಲ್ಲೇ ತಾಯಿಯನ್ನು, ಮನೆಯ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಪುತ್ತೂರಿನ ಬಳಿಯ ಪೋಳ್ಯಕ್ಕೆ ಬಂದರು. ಚಿಕ್ಕ ವಯಸ್ಸಿನಲ್ಲೇ ಖ್ಯಾತ ಕತೆಗಾರ, ಕವಿ ದಿ. ಯರ್ಮುಂಜ ರಾಮಚಂದ್ರರು ಒಡನಾಡಿಯಾದರು. ಬೆಂಗಳೂರಿನ ಕತೆಗಾರ ಮಾಸಪತ್ರಿಕೆಯಲ್ಲಿ ಪರಮಾನಂದ ಕಾವ್ಯನಾಮದಡಿಯಲ್ಲಿ ಬರೆದ ಹತ್ತಾರು ಕತೆಗಳು ನಿರಂತರವಾಗಿ ಪ್ರಕಟವಾದವು. ಹೆಸರಾಂತ ವಿಮರ್ಶಕ ಪ್ರೊ| ಎಲ್. ಎಸ್. ಶೇಷಗಿರಿರಾಯರು ಈ ಕತೆಗಳ ಸರಳ, ಕುತೂಹಲಕರ ಗುಣಗಳನ್ನು ಮುಕ್ತಕಂಠದಿಂದ ಹೊಗಳಿದ್ದರು. ಬನ್ನಂಜೆ ಗೋವಿಂದಾಚಾರ್ಯರ ಉಡುಪಿಯ ಪ್ರಕಾಶ ಪತ್ರಿಕೆ, ಜಯಮಾಲ, ಕಸ್ತೂರಿ, ಕರ್ಮವೀರ, ಪ್ರಜಾವಾಣಿ, ಸುಧಾ, ಮಯೂರ, ಧಾರವಾಡದ ನೂತನ ಪತ್ರಿಕೆಗಳಲ್ಲಿಯೂ ಕತೆಗಳು ಪ್ರಕಟವಾದವು.
೧೯೬೦ರಲ್ಲಿ ಶಿವರಾಮ ಕಾರಂತರ ವಿಚಾರವಾಣಿ ವಾರಪತ್ರಿಕೆಯನ್ನು ಪುತ್ತೂರಿನಲ್ಲಿ ಮುನ್ನಡೆಸಿದ ಸಾಹಿತಿಗಳಾದ ಡಾ| ಎಂ. ಬಿ. ಮರಕಿಣಿ, ಶಂಪಾ ದೈತೋಟ, ವಿ. ಬಿ. ಹೊಸಮನೆ ಮೊದಲಾದವರ ಗೆಳೆಯರ ಕೂಟದಲ್ಲಿ ಪರಮಾನಂದರೂ ಒಬ್ಬರಾಗಿ ಪತ್ರಿಕೆಯ ಮೊಳೆಗಳನ್ನು ಜೋಡಿಸಿದರು. ಲೇಖನಗಳನ್ನು ಬರೆದು  ಪ್ರಕಟಿಸಿದರು.  ನಂತರ ಕೃಷಿಯ ಜಾಡು ಹಿಡಿದು ಪರಮಾನಂದರು ಬೆಳ್ತಂಗಡಿಯ ಮಚ್ಚಿನಕ್ಕೆ ಬಂದರು. ಕೃಷಿ ಕೈ ಹಿಡಿಯಲಿಲ್ಲ. ಮತ್ತೆ ಹಲವು ವರ್ಷ ಮುದ್ರಣಾಲಯದಲ್ಲಿ ಮೊಳೆ ಜೋಡಿಸುತ್ತ ಜೀವನ ಸಾಗಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here