ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಭಾಗ ಇಂದು ಸುಟ್ಟು ಕರಕಲಾಗಿಹೋಗಿದೆ…. ಎಷ್ಟೋ ಪ್ರಾಣಿ ಪಕ್ಷಿ ಸಸ್ಯ ಸಂಕುಲಗಳು ಬೆಂಕಿಯಲ್ಲಿ ಬೂದಿಯಾಗಿ ಹೋಗಿದೆ…. ದಟ್ಟವಾದ ಹೊಗೆ ಆವರಿಸಿಕೊಂಡು ಏನೂ ಕಾಣಿಸದ ಕಾನನದ ಚಿತ್ರ ಪತ್ರಿಕೆಗಳಲೆಲ್ಲಾ ಪ್ರಕಟವಾಗಿದೆ… ಇಷ್ಟು ಹೇಳಿದಕೂಡಲೆ ಎಲ್ಲರಿಗೂ ಅರ್ಥವಾಗಿಹೋಗುತ್ತದೆ ಇದು ಪ್ರಪಂಚದ ಶೇಕಡಾ ಇಪ್ಪತ್ತರಷ್ಟು ಆಮ್ಲಜನಕವನ್ನು ಪೂರೈಸಿಕೊಡುವ ’ಲಂಗ್ಸ್ ಆಫ್ ದ ವರ್ಲ್ಡ್’ ಎಂಬ ಹೆಗ್ಗಳಿಕೆಯ ಅಮೇಝಾನ್ ಮಳೆಕಾಡುಗಳನ್ನು ಆವರಿಸಿದ ಕಾಳ್ಗಿಚ್ಚಿನ ಚಿತ್ರ ಎಂದು. ವರ್ಷವಿಡೀ ತೇವವಾಗಿರುವ ಈ ಮಳೆಕಾಡುಗಳು ವೈವಿಧ್ಯಮಯವಾದ ಸಸ್ಯ ಹಾಗೂ ಜೀವಸಂಕುಲಗಳ ಆವಾಸಸ್ಥಾನವೂ ಆಗಿದೆ. ಹಾಗಾಗಿ ಈ ರೀತಿಯ ಮಳೆಕಾಡುಗಳು ಬೆಂಕಿ ಅಪಘಾತಗಳಿಗೆ ತುತ್ತಾದರೆ ಸಂಭವಿಸುವ ನಷ್ಟವನ್ನು ಅಂದಾಜಿಸಲು ಸಾಧ್ಯವಿಲ್ಲ. ಈ ಕಾಡುಗಳಲ್ಲಿ ಹರಿಯುವ ಅಸಂಖ್ಯ ನದಿಗಳ ತಟಗಳು ಮಾನವ ವಸತಿಗಳ ದೀರ್ಘ ಚರಿತ್ರೆಯನ್ನೂ ಹೊಂದಿದೆ ಎಂಬುದು ಆಶ್ಚರ್ಯಹುಟ್ಟಿಸುವಂಥ ಸಂಗತಿ. ಭೂಮಿಯ ಆರೋಗ್ಯಕ್ಕೆ ಈ ಮಳೆಕಾಡುಗಳ ಕೊಡುಗೆ ಅಪಾರ. ಭೂಮಿಯು ಉತ್ಪಾದಿಸುವ ಇಂಗಾಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಮಹತ್ಕಾರ್ಯವನ್ನು ಈ ಮಳೆಕಾಡುಗಳು ಮಾಡುತ್ತವೆ.

ಈ ಎಲ್ಲ ವಿವರಗಳೊಂದಿಗೆ ಗೂಗಲ್ ಕೊಟ್ಟ ಮಳೆಕಾಡು ಬೆಂಕಿಗೆ ಆಹುತಿಯಾಗುತ್ತಿರುವ ಚಿತ್ರಗಳನ್ನು ನೋಡುತ್ತಿದ್ದಂತೆಯೇ ನನಗೆ ನಮ್ಮ ಕನ್ನಡದ ಕವಿ ಕುಮಾರವ್ಯಾಸ ಇದ್ದಕ್ಕಿದ್ದಂತೆ ನೆನಪಾಗಿಹೋದ. ಈ ಚಿತ್ರಗಳನ್ನು ಅವನು ಅಂದೇ ತನ್ನ ಶಬ್ದಗಳ ಮೂಲಕ ತೆಗೆದು ಕನ್ನಡಿಗರಿಗೆ ಕೊಟ್ಟಿದ್ದಾನಲ್ಲ ಅನ್ನಿಸಿತು ಆ ಕ್ಷಣಕೆ. ಕೂಡಲೆ ಭಾರತ ಕಥಾ ಮಂಜರಿಯ ಆದಿಪರ್ವದಲ್ಲಿ ಅವನು ಈ ಕಾಳ್ಗಿಚ್ಚಿನ ಚಿತ್ರಣವನ್ನು ನೀಡಿದ್ದೂ ನೆನಪಾಯಿತು. ಅದು ಕ್ರಷ್ಣಾರ್ಜುನರು ಸೇರಿ ಮಾಡಿದ ಖಾಂಡವವನ ದಹನದ ಪ್ರಸಂಗ.


’ಬಿದಿರ ಮೆಳೆಯಲಿ ಧಗಧಗಿಸಿ ಛಟಛಟನೆ ಛಟಛಟಿಸಿ ಕದಲಿ ಖರ್ಜೂರಾದಿ ತರುಜಾಲದಲಿ ಸಿಮಿ ಸಿಮಿ ಸಿಮಿ ಸಿಮಾಯತವೊದಗೆ ಘಾಡಿಸಿತು ಘನ ವಹ್ನಿ’ ’ಛಿಟಿಛಿಟಿಸಿ ಶಿಖಿ ಪುಟವಿಟ್ಟು..’ ಎಂದು ಮುಂತಾಗಿ ಬೆಂಕಿ ಚಿಟಿಚಿಟಿಲ್ ಎಂದು ಉರಿವ ಸದ್ದನ್ನು ಪದಗಳಲ್ಲಿ ಕಟ್ಟಿ ಓದುಗರಿಗೆ ನೀಡುತ್ತಾನೆ ನಮ್ಮ ನಾರಣಪ್ಪ. ’ಲಾಗಿಸಿ ಲಂಬಿಸಿ ಚುಂಬಿಸಿತು ಉರಿ ಲಲಿತನಂದನವ’ ಎನ್ನುತ್ತಾನೆ. ಅಷ್ಟೇ ಅಲ್ಲ ಈ ಬೆಂಕಿಯ ಶಾಖಕ್ಕೆ ’ಮೋರೆಯೊಣಗಿದುದು ಅಮರರಿಗೆ’ ಎಂದೂ ಹೇಳುತ್ತಾನೆ. (ಅಂದರೆ ಈ ಉರಿಯ ಶಾಖಕ್ಕೆ ದೇವತೆಗಳ ಮುಖವು ಒಣಗಿಹೋಯಿತು ಎಂದು) ಚಳಿ ಪ್ರದೇಶದಲ್ಲಿ ಬೆಂಕಿಯ ಎದುರು ಕುಳಿತು ಚಳಿ ಕಾಯಿಸುವವರಿಗೆ ಬೆಂಕಿಯ ಶಾಖಕ್ಕೆ ಈ ಮೋರೆಯೊಣಗುವ ಅನುಭವ ಚೆನ್ನಾಗಿಯೇ ಆಗಿರುತ್ತದೆ. ಹಾಗೆಯೇ ಈ ದಹನದ ಸಂದರ್ಭದಲ್ಲಿ ಯಾವ್ಯಾವ ಮರಗಳು ಬೆಂಕಿಗೆ ಆಹುತಿಯಾದವು ಎಂಬ ಒಂದು ಪಟ್ಟಿಯನ್ನೇ ನಾರಣಪ್ಪ ನೀಡುತ್ತಾನೆ. ಜಂಬು, ಚೂತ, ಪಲಾಶ, ವಟ, ದಾಳಿಂಬ, ಬಿಲ್ವ, ತಮಾಲ, ಚಂಪಕ, ನಿಂಬ, ಬಕುಳ, ಕಪಿತ್ಥ, ಕುಟಜ, ಅಶೋಕ, ಪುನ್ನಾಗ, ತುಂಬುರ, ಅರಳಿ, ಲವಂಗ, ಪೂಗ, ಕಸದಂಬ, ಗುಗ್ಗುಲ, ಸಾಲ, ತಿಲಕ, ಔದುಂಬರ ಈ ಮರಗಳನ್ನು ಆಲಂಗಿಸಿತು ಅಗ್ನಿ ಎಂದು ನಾಸಾ ಚಿತ್ತಿಸಿದ ಚಿತ್ರಕ್ಕೆ ಸಮನಾದ ಕಾಳ್ಗಿಚ್ಚಿನ ಚಿತ್ರಣವನ್ನು ಕುವರವ್ಯಾಸ ನೀಡುತ್ತಾನೆ. ಹಾಗೆಯೇ ದಳ್ಳುರಿಯಲ್ಲಿ ಶರಭ ಮೃಗಪತಿ, ಕರಿ, ಕಳಭ, ಶಾರ್ದೂಲ, ಸೂಕರ ಕರಡಿ, ಕಾಸರಶಲ, ಮೃಗಾವನ, ಖಡ್ಗ ಗೋಮಾಯ, ಎರಳೆ, ಮೊಲ, ಸಾರಂಗ, ವಾನರ, ಉರು ,ಕುರಂಗ ಮುಂತಾದ ಪ್ರಾಣಿಗಳೂ, ಶುಕ, ಮರಾಳ, ಮಯೂರ, ಟಿಟ್ಟಿಭ, ಪಿಕ, ಚಕೋರ, ಕಪೋತ, ವಾಯಸ, ಬಕ, ಪದಾಯುಧ, ಚಕ್ರವಾಕ, ಕಳಿಂಗ, ಕಲವಿಂಕ, ಕುಕಿಲ, ಸಾರಸ, ಕಾಕರಿಪು, ಚಾತಕ, ಭರದ್ವಾಜ, ಹರಡೆ, ಗೀಜಗ, ಮರಗೊಡೆಲೆ, ಕಾಬುರುಲೆ, ಲಾವುಗೆ, ಗೌಜು, ಪಾರಿವ, ನಿರಿಲೆ, ಸಾಳುವ, ಚಿಲಿಮಿಲಿಗ, ಚೆಂಬೋತ, ಮೀನ್ಬುಲಿಗ, ಮರಕುಟಿಗ, ಕಬ್ಬಕ್ಕಿ, ಕೊಟ್ಟುಗವರಲೆ, ಕೊಂಚೆ, ಕಪಿಂಜ, ಗಿಂಚಲು, ಗರಿಗ ಮೊದಲಾದ ಅಖಿಳ ಖಗಕುಲ ಬಿದ್ದುದುರಿಯೊಳಗೆ ಎಂದು ಪಕ್ಷಿಗಳ ದೊಡ್ಡ ಪಟ್ಟಿಯನ್ನೂ ನೀಡುತ್ತಾನೆ. ಇಷ್ಟೇ ಅಲ್ಲ ನಾರಣಪ್ಪನ ಈ ಪದ್ಯವನ್ನು ನೋಡಿ,

’ಛಿಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳು ಧ್ವನಿಮಯದಿ ಕಪಿಗಳ
ಕಿಳಕಿಳಾಯತ ರವದಿ ಮೃಗ ಸಂಕುಳದ ಕಳ ಕಳದಿ
ಹಿಳಿದುರಿವ ಹೆಬ್ಬಿದಿರಿನ ಗಂಟಿನ
ಠಳಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ|’
ಅಮೇಝಾನ್‌ನ ಪ್ರಸ್ತುತ ಪರಿಸ್ಥಿತಿಯೂ ಹೀಗೆ ’ಅದ್ಭುತವಾಯ್ತು ವನದಹನ’ ಎನ್ನುವಂತೆಯೇ ಇರಬಹುದು. ಕುಮಾರವ್ಯಾಸನ ಈ ಪದ್ಯವು ಒಂದು ಶಬ್ದಚಿತ್ರವಾಗಿ ನಿಲ್ಲಬಲ್ಲಷ್ಟು ಶಕ್ತಿಯುತವಾಗಿದೆ. ಈ ರೀತಿ ಅಂತರ್ಜಾಲದಲ್ಲಿ ನಾಸಾ ಇತ್ಯಾದಿ ಚಿತ್ರಿಸಿದ ಅಮೇಝಾನ್‌ನ ಕಾಳ್ಗಿಚ್ಚಿನ ಚಿತ್ರಗಳನ್ನು ನೋಡುವಾಗ ಕುಮಾರವ್ಯಾಸ ಮತ್ತೆ ಮತ್ತೆ ನೆನಪಾಗುತ್ತಾನೆ. ಆದರೆ ಅದು ದ್ವಾಪರಯುಗ. ಒಂದು ವನ ಉರಿದು ಬೂದಿಯಾದರೆ ಬಹಳ ಹಾನಿಯೇನೂ ಸಂಭವಿಸದ ಕಾಲವಾಗಿತ್ತು. ಈಗ ಇರುವ ಸೀಮಿತ ಕಾಡು ಪ್ರದೇಶಗಳು ಉರಿದುಹೋದರೆ ಅದು ಉಂಟುಮಾಡುವ ಹಾನಿ ಅಪಾರ.

 

*_ ರೇಶ್ಮಾ ಭಟ್

*******

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here