ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಮಿಲನೋತ್ಸವ ಮೂಡಬಿದರೆ ಪಡುಮಾರ್ನಾಡು ಜಿ. ಕೆ. ಗಾರ್ಡನ್ ಸಿಟಿಯಲ್ಲಿ ಜು.೩೦ ರಂದು ನಡೆಯಲಿದೆ ಎಂದು ದ.ಕ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿ ವಿಟ್ಲ ಹೇಳಿದರು.
ಅವರು ಶುಕ್ರವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶಾಮಿಯಾನ ಮಾಲಕರ ಹಾಗೂ ಕಾರ್ಮಿಕರ ಸಂಘಟನೆಯ ದೃಷ್ಠಿಯಿಂದ ಹುಟ್ಟಿಕೊಂಡ ಸಂಸ್ಥೆ ಸರ್ವರ ಸಹಕಾರದಿಂದ ಜಿಲ್ಲಾ ಪಟ್ಟದ ಸಂಘಟನೆಯಾಗಿ ಬೆಳೆದಿದೆ. ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಶಾಮಿಯಾನ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಶಾಮಿಯಾನ ಮಾಲಕರನ್ನು ಹಾಗೂ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮವಿದ್ದು, ವಿಶೇಷವಾಗಿ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಯೊಬ್ಬನನ್ನು ದತ್ತು ಸ್ವೀಕಾರ ಮಾಡಲಾಗುತ್ತಿದೆ ಎಂದರು.
ದ.ಕ. ಶಾಮಿಯಾನ ಮಾಲಕರ ಸಂಘದ ಮೂಡಬಿದರೆ ವಲಯ ಅಧ್ಯಕ್ಷ ಜಿ. ಗಣೇಶ್ ಕಾಮತ್ ಮಾತನಾಡಿ ಬೆಳಗ್ಗೆ 9ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಬನ್ನಡ್ಕ ಇಲ್ಲಿಯ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಮಾರ್ನಾಡುಬೀಡು ನಡೆಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಬು ಕೆ. ವಿ. ವಹಿಸಲಿದ್ದಾರೆ. ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪೈ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜಿಲ್ಲಾ ಕೋಶಾಧಿಕಾರಿ ಮುರಳೀಧರ ರಾವ್, ವಿವಿಧ ವಲಯಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ರಿಂದ ಕ್ರೀಡಾಕೂಟ, ಮಧ್ಯಾಹ್ನ ವಾರ್ಷಿಕ ಮಹಾಸಭೆ ನಡೆಯಲಿದೆ. ಸಂಜೆ 5ಕ್ಕೆ ವಾರ್ಷಿಕ ಮಿಲನೋತ್ಸವವನ್ನು ಶಾಸಕ ಉಮಾನಾಥ ಕೋಟ್ಯಾನ್ ನಡೆಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಬು ಕೆ. ವಿ. ವಹಿಸಲಿದ್ದಾರೆ. ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಅನಂತಪದ್ಮನಾಭ ಭಾಗವಹಿಸಲಿದ್ದಾರೆ. ಸಂಜೆ ೬ಕ್ಕೆ ಮನರಂಜನಾ ಕಾರ್ಯಕ್ರಮವಾಗಿ ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚೆಲ್ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಶಾಮಿಯಾನ ಮಾಲಕರ ಸಂಘದ ಕೋಶಾಧಿಕಾರಿ ಮುರಳೀಧರ್ ರಾವ್, ಉಪಾಧ್ಯಕ್ಷ ಎಂ. ಸುಭಾಶ್ಚಂದ್ರ ಜೈನ್, ಮೂಡಬಿದರೆ ವಲಯ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.