ವಿಟ್ಲ: ವಿರಕ್ತತೆ, ತ್ಯಾಗ ಭಾವನೆಯಿದ್ದಾಗ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ. ಪ್ರೀತಿಯಿಂದ ಮಾತ್ರ ಸುಂದರವಾದ ಮನೆ, ಸಮಾಜ, ಭವ್ಯ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಭಾನುವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ತಾಯಂದಿರು ಕಲಿಸುವ ಸಂಸ್ಕಾರ ವಿಚಾರಗಳು ಮಾತ್ರ ಮಕ್ಕಳ ಜೀವನದಲ್ಲಿ ಆತ್ಮವಿಶ್ವಾಸ, ಸನ್ನಡತೆಗೆ ಕಾರಣವಾಗುವುದು. ದೇವರ ಶಕ್ತಿಯೆದುರು ನಾವೆಲ್ಲರೂ ತೃಣ ಸಮಾನರು. ಮಕ್ಕಳಲ್ಲಿ ಸತ್ ಸಂಸ್ಕಾರ, ಧಾರ್ಮಿಕತೆ ತುಂಬಿಸಲು ಶ್ರೀಧಾಮ ನಿರಂತರ ಸತ್ಸಂಗ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಕೈಯ್ಯೂರು ನಾರಾಯಣ ಭಟ್ ಮಾತನಾಡಿ ಲೋಕೋದ್ಧಾರ ಕಾಯಕವೇ ಸಾಧುಸಂತರಿಗೆ ಪ್ರಿಯವಾದ ವಿಚಾರ. ಮಾಣಿಲಶ್ರೀಯವರು ಜನರೊಂದಿಗೆ ಬೆರೆತು ನೂರಾರು ಕ್ಷೇತ್ರಗಳ ಅಭಿವೃದ್ಧಿ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ನಡೆಸುತ್ತಿದ್ದಾರೆ ಎಂದರು.
ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ, ಸ್ವಾಗತಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ ವಂದಿಸಿದರು. ಶ್ರೀಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿ ಮಂಜು ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೋಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here