ವಿಟ್ಲ: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸರಿಯಾದ ಮಾಹಿತಿಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ನೋಂದಾವಣೆಗೆ ಅವಕಾಶ ನೀಡಬೇಕು. ಪಶುಸಂಗೋಪಣಾ ಇಲಾಖಾ ವತಿಯಿಂದ ಸಾಕು ನಾಯಿಗಳಿಗೆ ಲಸಿಕಾ ಶಿಬಿರವನ್ನು ಗ್ರಾಮದಲ್ಲಿ ಆಯೋಜಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ ಇವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಹಾಗೂ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಸರಕಾರದಿಂದ ದೊರಕುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಂಡು ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಬಂಟ್ವಾಳ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ್ ನೋಡೆಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಈ ಸಭೆಯಲ್ಲಿ ಆರೋಗ್ಯ, ಶಿಶು ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪಣೆ, ಕೃಷಿ, ಕಂದಾಯ, ಶಿಕ್ಷಣ ಇಲಾಖೆ, ಮೆಸ್ಕಾಂ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಾ ಮಾಧವ ಮಾವೆ ಗ್ರಾಮ ಸಭೆಯ ಮಹತ್ವದ ಬಗ್ಗೆ ತಿಳಿಸಿದರು. ಸಭೆಯಲ್ಲಿ ತಾ.ಪಂ.ಸದಸ್ಯರಾದ ಶೋಭಾ ಪಿ.ರೈ ಉಪಾಧ್ಯಕ್ಷರಾದ ಸುಧಾ ಎಸ್. ಶೆಟ್ಟಿ ಹಾಗೂ ಸದಸ್ಯರುಗಳಾದ ಕೆ ಅಬ್ದುಲ್ಲ, ಜಯಂತ ಪಿ, ಅಬೂಬಕ್ಕರ್, ಸಿದ್ಧಿಕ್, ಪ್ರೇಮಲತಾ, ಭಾರತೀ ಎಸ್.ಶೆಟ್ಟಿ, ವಿಮಲ, ಭಾಸ್ಕರ ಶೆಟ್ಟಿಗಾರ್, ಅಬ್ದುಲ್ ರಹಿಮಾನ್, ಶರೀಫ್, ನಾಗೇಶ್ ಶೆಟ್ಟಿ, ರೇಷ್ಮಾ ಶಂಕರಿ, ದಾಕ್ಷಾಯಿಣಿ, ನೆಬಿಸ ಸಭೆಯಲ್ಲಿ ಹಾಜರಿದ್ದರು.
ಪಿಡಿಒ ಸುಜಯಾ ಕೆ. ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ದೇವಪ್ಪ ಪಿ. ವರದಿ ಮಂಡಿಸಿದರು. ಗ್ರಾ.ಪಂ.ಸಿಬ್ಬಂದಿಗಳಾದ ಹರಿಣಾಕ್ಷಿ ಪಿ, ಕೃಷ್ಣ ನಾಯ್ಕ, ಮಹೇಶ್ ಪಿ, ಯತೀಶ ಪಿ. ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here