ಅಡ್ಯನಡ್ಕ: ವಿಧ್ಯೆಗೂ ಜ್ಞಾನಕ್ಕೂ ವ್ಯತ್ಯಾಸವಿದೆ. ಜ್ಞಾನಕ್ಕೆ ಸಮಾನವಾದದು ಬೇರಾವುದೂ ಇಲ್ಲ. ಜ್ಞಾನವು ಮನುಷ್ಯನೊಳಗೆ
ಆವಿರ್ಭವವಾಗುವ ವಿಶೇಷ ಸಾಮರ್ಥ್ಯ ಎಂದು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್ ಪಾಟಾಳಿ
ಹೇಳಿದರು.
ಅವರು ಜು. 13ರಂದು ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಸಂಪನ್ಮೂಲ
ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ ಅಧ್ಯಕ್ಷತೆ ವಹಿಸಿದ್ದರು. ಜನತಾ ಪದವಿಪೂರ್ವ ಕಾಲೇಜಿನ
ಪ್ರಾಂಶುಪಾಲ ಡಿ. ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಕೆ.,
ಉಪಾಧ್ಯಕ್ಷರಾಗಿ ವಿಶ್ವೇಶ್ವರ ಶಾಸ್ತ್ರಿ, ಖಜಾಂಚಿಯಾಗಿ ಜಯರಾಮ ಆಳ್ವ ಆಯ್ಕೆಯಾದರು. ಜೀವಶಾಸ್ತ್ರ ಉಪನ್ಯಾಸಕ ರವಿಕುಮಾರ್
ಎಸ್. ಅವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಹಿಂದಿ ಉಪನ್ಯಾಸಕ ಸೋಮಶೇಖರ್ ಎಚ್. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಜಯಶ್ರೀ ಕೆ.ಆರ್.
ಸ್ವಾಗತಿಸಿ, ಕನ್ನಡ ಉಪನ್ಯಾಸಕ ಶೀನಪ್ಪ ನಾಯ್ಕ್ ನಿರೂಪಿಸಿ, ದೈಹಿಕ ಶಿಕ್ಷಣ ನಿರ್ದೇಶಕ ವಸಂತ ಕೆ. ವಂದಿಸಿದರು.