ವಿಟ್ಲ : 2015-2020ನೇ ಸಾಲಿಗೆ ಚುನಾಯಿತರಾಗಿರುವ ಕೊಳ್ನಾಡು ಗ್ರಾಮ ಪಂಚಾಯಿತಿ ಆಡಳಿತವು ಅವಧಿಗೆ ಮೊದಲೇ ಗುರಿ ಮುಟ್ಟಿದ ಸಾಧನೆಯನ್ನು ಮಾಡಿದೆ. ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗ್ರಾಮದ ಜನತೆ ಬಹಳಷ್ಟು ನಿರೀಕ್ಷೆ ವ್ಯಕ್ತಪಡಿಸಿದಾಗ ರಸ್ತೆ, ನೀರು, ವಿದ್ಯುತ್, ವಸತಿ, ನಿವೇಶನಗಳ ಜೊತೆಗೆ ಶಿಕ್ಷಣ ಆರೋಗ್ಯದಂತಹ ಇತರ ಮೂಲ ಅವಶ್ಯಕತೆಗಳನ್ನು ಕಲ್ಪಿಸುವುದರ ಜೊತೆಗೆ ಭವಿಷ್ಯದ ಯೋಜನೆಗಳಿಗೆ ಅನುಕೂಲವಾಗಲು ಸ್ವಂತ ಸಂಪನ್ಮೂಲವನ್ನು 50 ಲಕ್ಷಕ್ಕೆ ಏರಿಸುವ ಗುರಿಯಿಡಲಾಗಿತ್ತು. ಒಂದು ವರ್ಷ ಮುಂಚಿತವಾಗಿ ಅಂದರೆ 4 ವರ್ಷ ಪೂರ್ತಿಗೊಂಡಾಗ ಗುರಿಯನ್ನು ತಲುಪಲಾಗಿದೆ ಎಂದು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಹೇಳಿದರು.
ಅವರು ಸೋಮವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ಮಾತ್ರವಲ್ಲದೆ ಆಕರ್ಷಕ ಕಚೇರಿ ಕಟ್ಟಡ ನಿರ್ಮಾಣ, ಮಾದರಿ ಗ್ರಾಮ ಸಭೆಗಳ ಆಯೋಜನೆ, ಪಾರದರ್ಶಕ ಆಡಳಿತದ ಜೊತೆ ನಾನಾ ಇಲಾಖಾ ಮಾಹಿತಿ ಮತ್ತು ಆರೋಗ್ಯ ಶಿಬಿರ ತರಬೇತಿ ನೀಡುವ ಮೂಲಕ ಸಮುದಾಯವನ್ನು ವಿಶ್ವಾಸಕ್ಕೆ ಪಡೆದು ಶಿಸ್ತುಬದ್ಧ ಆಡಳಿತ ನೀಡಿ ರಾಜ್ಯ ಸರಕಾರದಿಂದ 10 ಲಕ್ಷ ವಿಶೇಷ ಅನುದಾನದ ಪುರಸ್ಕಾರ ಪಡೆದ ಹೆಗ್ಗಳಿಕೆ ನಮ್ಮದಾಗಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸಹಕಾರದಿಂದ ವಿಶೇಷ ಅನುದಾನಗಳ ಕ್ರೋಢೀಕರಣದಿಂದ 70 ಕೋಟಿಗಿಂತಲೂ ಅಧಿಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದರ ಜೊತೆಗೆ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಹಾಗೂ ಇತರ ಜನಪ್ರತಿನಿಧಿಗಳಲ್ಲಿಯೂ ರಾಜಕೀಯ ಬೆರೆಸದೆ ಗ್ರಾಮದ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.
2019-2020 ಸಾಲಿಗೆ ಸ್ವಂತ ಆದಾಯವನ್ನು 57 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಭವಿಷ್ಯದಲ್ಲಿ ಆಡಳಿತ ನಡೆಸುವವರಿಗೆ ಶಾಶ್ವತ ಭದ್ರನೆಲೆ ಕಲ್ಪಿಸಲಾಗಿದೆ. ಸಾಲೆತ್ತೂರು ಮೈದಾನದಲ್ಲಿ ತರಕಾರಿ ಮೀನು ಮಾಂಸ ಮಾರುಕಟ್ಟೆಗಳಲ್ಲದೆ ಸಮಾರಂಭಗಳಿಗೆ ಅನುಕೂಲವಾಗಲು ವಿಶಾಲವಾದ ಸೌಹಾರ್ದಭವನ ವಾಣಿಜ್ಯ ಸಂಕೀರ್ಣ ಸಂಸ್ಕೃತಿ ಭವನ ಶೌಚಾಲಯಗಳೊಂದಿಗೆ ಆಕರ್ಷಣೀಯ ನವ ಸಾಲೆತ್ತೂರು ಪೇಟೆ ನಿರ್ಮಾಣವಾಗಿದೆ. ಗ್ರಾಮ ವ್ಯಾಪ್ತಿಯಲ್ಲಿ ಪ್ರಮುಖ ಹಾಗೂ ಒಳ ರಸ್ತೆಗಳಿಗೂ ಡಾಂಬರು, ಕಾಂಕ್ರೀಟ್ ರಸ್ತೆ ನಿರ್‍ಮಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಸಮರ್ಪಕವಾಗಿ ಸದ್ವಿನಿಯೋಗಿಸಲಾಗಿದೆ. ಗ್ರಾಮ ಪಂಚಾಯಿತಿ ಒಟ್ಟು 4 ವರ್ಷಗಳಲ್ಲಿ ಉದ್ಯೋಗ ಖಾತ್ರಿ, 14ನೇ ಹಣಕಾಸು, ಸ್ವಂತ ಅನುದಾನ ಸೇರಿ ಒಟ್ಟು 4,33,54,786 ರೂ ಗಳ ಕಾಮಗಾರಿ ಅನುಷ್ಠಾನಗೊಳಿಸಿದೆ. ಮುಂದಿನ ಸಾಲಿನಲ್ಲಿ ಗ್ರಾಮದ ಅವಶ್ಯಕ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಗ್ರಾ.ಪಂ.ಸದಸ್ಯರಾದ ಪವಿತ್ರ ಪೂಂಜ, ಜಯಂತಿ ಎಸ್.ಪೂಜಾರಿ, ಟಿ.ಯೂಸುಫ್ ಉಪಸ್ಥಿತರಿದ್ದರು.
