ತುಳು ಮಾತನಾಡಬಲ್ಲೆ, ಕನ್ನಡ ಅರೆಬರೆಯೆಂಬ ಪಾಡು ನನ್ನದಾಗಿದ್ದ ಒಂದು ಕಾಲವಿತ್ತು, ನಾನಿಂದು ಎಂ.ಎ ಕನ್ನಡ ಹಾಗೂ ಕನ್ನಡದ ಸಣ್ಣ ಕವಯತ್ರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಂತಸವಾಗುತ್ತದೆ. ನಕ್ಸಲಿಯರ ಊರೆಂದೇ ಒಂದು ಕಾಲದಲ್ಲಿ ಹೆಸರಾಗಿದ್ದ ಈಗಿನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೂಲೆಯಲ್ಲಿ, ಬೆಟ್ಟದ ತಪ್ಪಲಿನಲಿರುವ ಅಂದದ ಪುಟ್ಟ ಹಳ್ಳಿ ಈದು..ಹೆಸರೆಷ್ಟು ಸ್ಪೆಶಲ್ಲೋ ನಮ್ಮ ಬಾಲ್ಯವೂ ಅಷ್ಟೇ ವಿಭಿನ್ನವಾಗಿತ್ತು. ಹದಿನೈದು ಮಕ್ಕಳ ದೊಡ್ಡ ಗುಂಪನ್ನು ಹೊಂದಿದ್ದ ಅಲ್ಲಿ ಕ್ರಿಕೆಟ್ ಆಟಗಾರರು, ಹಾಡುಗಾರರು, ಈಜುಪಟುಗಳು, ಓಟಗಾರರು, ಬೀಡಿ ಕಟ್ಟುವವರು ಎಲ್ಲರೂ ಇದ್ದರು. ಆಗ ಪ್ರತಿಯೊಬ್ಬರ ವಯಸ್ಸೂ ಎಂಟರಿಂದ ಹನ್ನೆರಡು. ಮರಕೋತಿಯಾಟದಿಂದ ಹಿಡಿದು, ಚಿಪ್ಪಿನಲ್ಲಿ ಮಣ್ಣು ತುಂಬಿಸಿ ಇಡ್ಲಿ ಮಾಡಿ ಇಡುವ ಹೋಟೆಲ್, ವಿಮಾನ ಚಿಟ್ಟೆಯನ್ನು ಹಿಡಿದು ಬೀಡಿಗೆ ಹಾಕುವ ನೂಲಿನಿಂದ ಕಟ್ಟಿ ಹಾಕಿ, ಭೂತಕ್ಕೆ ಕೋಳಿ ತಲೆ ಕಡಿಯುವುದನ್ನು ನೋಡಿದ್ದ ನಾವು ಚಿಟ್ಟೆಯ ತಲೆ ತೆಗೆಯುತ್ತಿದ್ದೆವು! ಅಕ್ಕಪಕ್ಕದ ಮನೆಯ ಹಿರಿಯರೊಂದಿಗೂ, ಮಕ್ಕಳೊಂದಿಗೂ ಒಗ್ಗಟ್ಟಿತ್ತು. ಯಾರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ಎಲ್ಲಾ ಮಕ್ಕಳೂ ಅಲ್ಲಿ ಹಾಜರ್. ಗದ್ದೆಯ ಕೆಲಸಕ್ಕೂ ರೆಡಿ, ಅಡಿಕೆ ಹೆಕ್ಕುವ ಕಾರ್ಯಕ್ಕೂ ರೆಡಿ, ಊಟಕ್ಕೂ ಸೈ, ತಿಂಡಿಗೂ ಸೈ!

ಈಗಿನಂತೆ ಆಗ ಬೇಕು ಬೇಕಾದ ಹಾಗೆ ತಿನ್ನಲು ಅಂಗಡಿ ತಿಂಡಿಗಳು ಸಿಗುತ್ತಿರಲಿಲ್ಲ, ಮಿಕ್ಸರ್ , ರಸ್ಕ್ ಮಾತ್ರ ಅಂಗಡಿಯಿಂದ ಸಂಜೆ ಚಹಾಕ್ಕೆ ಜೊತೆಗಿರುತ್ತಿದ್ದ ತಿಂಡಿಗಳಾದ ಕಾರಣ ನಮ್ಮ ಆರೋಗ್ಯ ಮನೆಯೂಟದಿಂದ ಗಟ್ಟಿಮುಟ್ಟಾಗಿತ್ತು! ಗ್ಯಾಸ್ಟ್ರಿಕ್, ಆ್ಯಸಿಡಿಟಿಗಳೆಂಬ ಪದಗಳೇ ನಮಗೆ ತಿಳಿದಿರಲಿಲ್ಲ! ಪಿಜ್ಜಾ ,ಬರ್ಗರ್ಗಳ ಪರಿಚಯವೂ ಇರಲಿಲ್ಲ! ಬಾಳೆಕಾಯಿ, ಬಾಳೆಹೂ,ಬಾಳೆ ದಿಂಡು, ಒಂದೆಲಗ ಸೊಪ್ಪು, ಬದನೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಸಿಹಿಗುಂಬಳ(ಚೀನಿಕಾಯಿ) ನುಗ್ಗೆಸೊಪ್ಪು, ಮನೆ ಹತ್ತಿರ ತಾನಾಗೇ ಬೆಳೆಯುವ ಹಲವು ಸೊಪ್ಪುಗಳು, ನಮ್ಮ ತೆಂಗಿನಕಾಯಿಯಿಂದಲೇ ಗಾಣದಲ್ಲಿ ತೆಗೆದ ತೆಂಗಿನೆಣ್ಣೆ, ನಮ್ಮ ಗದ್ದೆಯಲ್ಲೆ ಬೆಳೆದ ಅಕ್ಕಿಯ ಆಹಾರ ನಮಗೆ ಹಿರಿಯರಿಂದ ಸಿಗುತ್ತಿದ್ದುದು! ಈಗಿನ ಫುಡ್ ಎಕ್ಸ್ ಫರ್ಟ್ ಗಳು ಏನೇನು ಆರೋಗ್ಯಕರ ಆಹಾರದ ಬಗ್ಗೆ ಸಲಹೆ ಕೊಡುತ್ತಿದ್ದರೋ ಅದನ್ನೇ ನಮ್ಮ ಒಂದು ದಿನವೂ ಶಾಲೆಗೆ ಹೋಗದ ಹಿರಿಯರು ತಯಾರಿಸಿ ಕೊಡುತ್ತಿದ್ದುದನ್ನು ನೆನೆಸಿಕೊಂಡರೆ ನಮ್ಮ ಹಿರಿಯರ ಬಗ್ಗೆ ಹೆಮ್ಮೆಯೆನಿಸುತ್ತದೆ, ಪ್ರೀತಿ ಹೆಚ್ಚಾಗುತ್ತದೆ!
ವಾರದ ಸಂತೆಯ ದಿನ ಮೀನು, ತಪ್ಪಿದರೆ ಮಳೆಗಾಲದಲ್ಲಿ ಹೊಳೆಯಲ್ಲಿ ಸಿಗುವ ಮೀನು, ಏಡಿಗಳು, ಮನೆಯಲ್ಲೇ ಇರುವ ಕೋಳಿ ಇಟ್ಟ ಮೊಟ್ಟೆ, ಊರು ಕೋಳಿಯ ಸ್ವಾದಿಷ್ಟ ಅಡಿಗೆ ತಿಂಗಳಿಗೊಮ್ಮೆ ಭೂತ-ದೈವದ ಹೆಸರಿನಲ್ಲಿ ಮಾಂಸಪ್ರಿಯರಿಗೆ! ಯಾವ ಅನಾರೋಗ್ಯವಿಲ್ಲದ ನೆಮ್ಮದಿಯ ಜೀವನ!


ಅಬ್ಬಾ! ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತದೆ! ಮತ್ತೆ ನನ್ನ ಬಾಲ್ಯಕ್ಕೆ ಹಾರಿಬಿಡಲೇ ಎಂಬ ಮನಸ್ಸಾಗುತ್ತದೆ! ನಾವಿಂದು ಅದೆಷ್ಟು ಬದಲಾಗಿದ್ದೇವೆಂದರೆ ಮನೆಯಲ್ಲಿ ಬೆಳೆಯಲು ಒಂದಿಂಚು ಜಾಗವಿಲ್ಲ, ಬಾಡಿಗೆ ಮನೆಯಲ್ಲಿ ನಮ್ಮ ಸಾಮಾನುಗಳಿಡುವುದೇ ಕಷ್ಟ! ಇನ್ನು ಬೆಳೆ ಬೆಳೆಯುವ ಮಾತೆಲ್ಲಿ! ಪ್ರತಿಯೊಂದೂ ಹೊರಗಿನ ಆಹಾರ ಪದಾರ್ಥ. ಪ್ರತಿಯೊಂದರಲ್ಲೂ ರಾಸಾಯನಿಕ ವಿಷ! ತರಕಾರಿಯನ್ನೂ ಬಿಟ್ಟಿಲ್ಲ, ಸಾಂಬಾರ ಪದಾರ್ಥಗಳು, ಪುಡಿಗಳು, ರೆಡಿ ಆಹಾರಗಳು, ಎಣ್ಣೆ ತಿಂಡಿಗಳು ಎಲ್ಲವೂ ಟೇಸ್ಟ್ ಹಾಗೂ ವಿಷಮಯ! ಯಾವುದಾದರೂ ಗ್ರಹಣ ಬಂದರೆ ನೇರಳಾತೀತ ಕಿರಣಗಳಿಂದ ಇರುವ ಆಹಾರಕ್ಕೆ ಹಾನಿಯಾಗಬಹುದೆಂಬ ಕಾರಣದಿಂದ ನಮ್ಮ ಹಿರಿಯರು ಉಪವಾಸ ಮಾಡುತ್ತಿದ್ದರು ಮತ್ತು ಗ್ರಹಣ ಮುಗಿದ ಬಳಿಕ ಮಿಂದು ಅಡಿಗೆ ಮಾಡಿ ಬಡಿಸುತ್ತಿದ್ದರು! ಅದಕ್ಕಿಂತ ವಿಷಯುಕ್ತ ಆಹಾರವನ್ನು ಪ್ರತಿ ಹೊತ್ತು ಹೊತ್ತಿಗೂ ತಿನ್ನುವಂಥ ನಮಗೆ ಈಗ ಗ್ರಹಣದ ಉಪವಾಸ ಬೇಕೇ?
ನಮ್ಮ ಬಗ್ಗೆಯೂ, ನಮ್ಮ ಮಕ್ಕಳ ಬಗ್ಗೆಯೂ, ಮನೆಯಲ್ಲಿ ಸಾಕಿರುವ ನಾಯಿ, ಬೆಕ್ಕು, ದನಗಳ ಬಗ್ಗೆಯೂ, ಇತರ ಹೊರಗಿನ ಪ್ರಾಣಿಗಳ ಬಗ್ಗೆ ಹೆಚ್ಚೇಕೆ ನಮಗೆ ಮೊಬೈಲ್ ನಲ್ಲಿ ಮುಳುಗಿ ಹೋದರೆ ನಮ್ಮ ಮಕ್ಕಳ ಬಗ್ಗೆಯೂ ಕಾಳಜಿ ಇಲ್ಲವೆಂಬುದನ್ನು ಹಲವಾರು ವೀಡಿಯೋ ಕ್ಲಿಪ್ಪಿಂಗ್ ಗಳು ತೋರಿಸುತ್ತಿಲ್ಲವೇ? ಅಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಹಾಗಿರುವಾಗ ನಾವು ಬದಲಾಗುತ್ತಿದ್ದೇವೋ, ಬದಲಾಗಿದ್ದೇವೋ ಅಥವಾ ಕಾಲವೇ ಬದಲಾಗಿದೆಯೋ ತಿಳಿದಿಲ್ಲ. ಒಟ್ಟಿನಲ್ಲಿ ಪಾಸ್ಟ್ ಈಸ್ ಗುಡ್ ಎಂದು ಹೇಳುವುದರ ಜೊತೆಗೆ ನಮ್ಮ ಹಿರಿಯರು ಹೇಳಿದಂತೆ ‘ನಮ್ಮ ಕಾಲವೇ ಚೆನ್ನಾಗಿತ್ತು’ ಎಂದು ನಾವೂ ಹೇಳುತ್ತಾ ಚರಿತ್ರೆ ಪುನರಾವರ್ತನೆಯಾಗುತ್ತದೆ ಎನ್ನುವ ಮಾತನ್ನು ಸತ್ಯ ಮಾಡಿ ತೋರಿಸಬೇಕಷ್ಟೇ. ನೀವೇನಂತೀರಿ?

 


@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here