ಮಳೆಗಾಲ ಒಂದು ಕಾಲದಲ್ಲಿ ಹೀಗಿತ್ತು! ಸುಮಾರು ಇಪ್ಪತ್ತು ವರ್ಷಗಳಷ್ಟು, ಎರಡು ದಶಕ ಅಂದರೂ ಸರಿಯೇ, ಹಿಂದೆ ಹೋಗಿ ಸಿಂಹಾವಲೋಕನ ಮಾಡಿದಾಗ, ಶಾಲಾ ಮಕ್ಕಳಿದೂ ಮಳೆಗೂ ಅವಿನಾಭಾವ ನಂಟು! ಬೆಳಗ್ಗೆ ಶಾಲೆಗೆ ಮಕ್ಕಳು ಬರುವಾಗ ಜೋರಾಗಿ ಮಳೆಯೂ ಬರುತ್ತದೆ! ಸಂಜೆ ಶಾಲೆ ಬಿಡುವಾಗಲೂ ಜೋರು ಮಳೆ! ಮಕ್ಕಳು ನೆನೆದುಕೊಂಡೇ ಮನೆ ಸೇರಬೇಕು! ಆಗ ಬರದಿದ್ದರೆ ಮಳೆಗೂ ಸಮಾಧಾನವಿಲ್ಲ! ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದಕ್ಕೇ ನಾನು ದೇವರಿಗೆ ಸದಾ ಋಣಿಯಾಗಿದ್ದೇನೆ. ಸದಾ ದೇವರಂಥ ಮನಸ್ಸಿನ ಮಕ್ಕಳೊಡನೆ ಇರುವ, ಬೆರೆವ, ಕೆಲಸ ಮಾಡುವ ಭಾಗ್ಯ ಶಿಕ್ಷಕರಿಗಲ್ಲದೆ ಮತ್ಯಾರಿಗೆ ಸಿಗಲು ಸಾಧ್ಯ ಹೇಳಿ! ಅಂಥ ಗ್ರೇಟ್ ಕೆಲಸವನ್ನು ದಯಪಾಲಿಸಿದ ದೇವರಿಗೆ ಶರಣು!
ವಿಷಯಾಂತರವಾಯಿತು, ಕ್ಷಮಿಸಿ, ಮಳೆಗಾಲದ ಬಗ್ಗೆ ಹೇಳಬೇಕು ನಾನು!ಹಲಸಿನ ಬೀಜ, ಗೆಣಸು, ಉಪ್ಪು ಹಾಕಿ ಬೇಯಿಸಿ ಇಡುತ್ತಿದ್ದ ಅಜ್ಜಿಯರು, ಹಲಸಿನ ಹಪ್ಪಳ, ಮಾವಿನ ಹಣ್ಣಿನ ಸೀಕರಣೆ, ಹಲಸಿನ ಉಪ್ಪಿನ ಸೊಳೆ ಪಲ್ಯ, ಸಾರಿಗೆ,, ದಪ್ಪದ ಉಪ್ಪಿನ ಮಾವಿನಕಾಯಿ ಚಟ್ನಿಗೆ, ಭರಣಿಗಳಲ್ಲಿ ರೆಡಿಯಾಗಿ ಕುಳಿತಿರುತ್ತಿತ್ತು! ಅಟ್ಟದಲ್ಲಿ ಅಕ್ಕಿ ಮುಡಿಗಳಲ್ಲಿ ಬೆಚ್ಚಗೆ ಕುಳಿತ ಅಕ್ಕಿ, ಮಾಡಿನ ಕೆಳಗೆ ಬಾಳೆ ದಿಂಡಿನ ಹಗ್ಗದಲ್ಲಿ ಜೋತಾಡುತ್ತಿರುವ ಮನೆಯ ಗದ್ದೆಯಲ್ಲೇ ಬೆಳೆದ ಸೌತೆಕಾಯಿ, ಬೂದು ಕುಂಬಳ, ಸಿಹಿಗುಂಬಳಗಳ ಸಾಲು! ಆಹಾ.. ಪ್ರತಿ ಮಳೆಗಾಲವೂ ಆನಂದಮಯ!
ಅಷ್ಟೇ ನೆನಪುಗಳಲ್ಲ, ಶಾಲೆಗೆ ನಡೆದುಕೊಂಡು ಹೋಗುವಾಗ ಮಣ್ಣಿನ ರಸ್ತೆಯಲ್ಲಿ ಸಿಗುವ ಸಣ್ಣ ಗುಂಡಿಗಳಲ್ಲಿ ನಿಂತ ನೀರನ್ನು ನೋಡಿ ಅದಕ್ಕೆ ಒಮ್ಮೆಲೇ ಹಾರಿ ತನ್ನ ಹಾಗೂ ತನ್ನೊಡನಿರುವವರ ಬಟ್ಟೆ ಒದ್ದೆ ಮಾಡಿ ಪಡೆಯುತ್ತಿದ್ದ ಎಂಜಾಯ್ ಮೆಂಟ್ ಈಗಿನ ಮಜಾ ಟಾಕೀಸ್, ಮಜಾಭಾರತ, ಕಪಿಲ್ ಶರ್ಮಾ ಶೋಗಳಲ್ಲಿ ಸಿಗುವುದೇ! ಮಳೆಗಾಲದಲ್ಲಿ ಸಿಗುವ ಮಾವಿನಹಣ್ಣು, ಹಲಸಿನ ಹಣ್ಣು, ಕುಂಟಾಲ ಹಣ್ಣು, ನೇರಳೆಹಣ್ಣು, ಬಾಯಿ ನೇರಳೆ ಮಾಡುವ ನೆಕ್ಕರೆ ಹಣ್ಣುಗಳನ್ನು ತಿಂದರೆ ಜ್ವರ ಬರುವುದು, ತಿನ್ನಲೇ ಬಾರದೆಂಬ ಕಟ್ಟಾಜ್ಞೆ ಮನೆಯವರದಾದರೂ ತಿನ್ನುವ ನಮ್ಮ ಜಾಯಮಾನವನ್ನು ನಾವು ಬಿಡುವೆವೇ? ಉಪ್ಪು ಹಾಕಿಯಾದರೂ ಸಿಕ್ಕಿದ ಅನನಾಸು, ಗೇರುಹಣ್ಣುಗಳ ರಸ ಹೀರುತ್ತಿದ್ದ ಕಾಲದ ಮಹಿಮೆ ಬಲ್ಲವನಿಗೇ ಗೊತ್ತು!
ಕೆಸರು ನೀರಿನಾಟದ ಸವಿ ಈಗಿನ ನೀಟಾದ ಯೂನಿಫಾರ್ಮ್, ಶೂಸ್ ಹಾಕಿ ಟಿಪ್ ಟಾಪಾಗಿ ಶಾಲೆಗೆ ಹೋಗುವ, ಶಿಸ್ತಿನ ಸಿಪಾಯಿಗಳಂತೆ ನಾಲ್ಕು ಕೋಣೆಯೊಳಗೆ ಬೆಳೆವ ಮಕ್ಕಳಿಗೆ ಹೇಗೆ ಅನುಭವವಾಗಬೇಕು? ಮಣ್ಣು ಮುಟ್ಟಿದರೆ ಅಲರ್ಜಿ, ಕೆಸರು ತುಳಿದರೆ ಸ್ಕಿನ್ ಡಿಸೀಝ್ ಬರುವ ಮಕ್ಕಳು ರೈತರು ಹೇಗಾದಾರು! ಬಲ್ಲವನೇ ಬಲ್ಲ ಬೆಲ್ಲದ ಸವಿಯ! ಮಳೆಗಾಲದಲ್ಲಿ ಮರ ಹತ್ತಿ ಜಾರಿದ ಅನುಭವ, ಜಾರಿ ಬಿದ್ದು ಇದ್ದ ಒಂದೇ ಒಂದು ಯೂನಿಫಾರ್ಮ್ ಒದ್ದೆಯಾಗಿ ಮನೆಗೆ ಬಂದು ರಜೆ ಹಾಕಿದ ದಿನ, ಊರಿಗೂರೇ ದೇವಸ್ಥಾನದಲ್ಲಿ ಹಬ್ಬ ಮಾಡಿ ಸಿಹಿ ಹಂಚಿದ ಕ್ಷಣ, ಅಮ್ಮ ಬಯ್ಯುವರೆಂದು ಕದ್ದು ಕಿರುಪರೀಕ್ಷೆಯ ಅಂಕಗಳ ಅಂಕಪಟ್ಟಿಗೆ ತಾನೇ ಪೋಷಕರ ಸಹಿ ಹಾಕಿ ಸಿಕ್ಕಿ ಹಾಕಿಕೊಂಡು ಪೆಟ್ಟು ತಿಂದ ದಿನ, ಅಮ್ಮ ಇಲ್ಲದಾಗ ಅಡಿಗೆ ರೂಮಿಗೆ ನುಗ್ಗಿ ತುಪ್ಪ,ಬೆಲ್ಲ,ತೆಂಗಿನಕಾಯಿ ಕದ್ದು ತಿಂದ ಸಿಹಿ ಕ್ಷಣಗಳು ಈಗ ಮಳೆಗಾಲದ ಭೋರ್ಗರೆಯುವ ಮಳೆನೀರು ಕೊಚ್ಚಿ ಹೋದಂತೆ ಹೋದರೂ ನೆನಪುಗಳು ಬಂಡೆಗಲ್ಲಿನಂತೆ ಗಟ್ಟಿಯಾಗಿ ತಳವೂರಿ ನಿಂತಿವೆ. ಮಳೆಯೊಡನೆ ಶುದ್ಧವಾದ ನೀರೂ ಕಡಿಮೆಯಾಗಿದೆ, ಬರಗಾಲ, ಜನಸಂಖ್ಯೆ, ಮಾನವೀಯ ಮೌಲ್ಯಗಳೂ ಕಡಿಮೆಯಾಗಿವೆ. ಉತ್ತಮ ಎಂದರೆ ಉದಾತ್ತ ಆಲೋಚನೆಗಳು ಮಾತ್ರ! ಮಳೆ ಬರಲಿ, ಇಳೆ ಒಣಗದಿರಲಿ, ಅದಕ್ಕೆ ನಮ್ಮ ಕೊಡುಗೆಯೂ ಇರಲಿ! ನೀವೇನಂತೀರಿ?

 

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here