ಬಂಟ್ವಾಳ: ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚಿನಲ್ಲಿ “ಲಾವ್ದಾತೊ ಸಿ” ಪರಿಸರ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಪೋಪ್ ಫ್ರಾನ್ಸಿಸ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನರವರ ಮಾರ್ಗದರ್ಶನದಂತೆ ನಡೆದ ಕಾರ್ಯಕ್ರಮವನ್ನು ಬೊರಿಮಾರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು, ಚರ್ಚ್ ನ ಧರ್ಮಗುರು ವಂದನೀಯ ಗ್ರೆಗರಿ ಪಿರೇರಾ ರವರಿಗೆ ಗಿಡವನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಧರ್ಮಗುರು ವಂ.ಗ್ರೆಗರಿ ಪಿರೇರಾ ರವರು, ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸಬೇಕು, ಗಿಡಗಳನ್ನು ನೆಟ್ಟು, ಪ್ರೀತಿಸಿ, ಬೆಳೆಸುವುದರಲ್ಲಿ ದೇವರನ್ನು ಕಾಣುತ್ತೇವೆ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದವರು ಕರೆ ನೀಡಿದರು.
ತಾನು ಸ್ವೀಕರಿಸಿದ ಗಿಡವನ್ನು ಚರ್ಚ್ ಆವರಣದಲ್ಲಿ ನೆಟ್ಟು ಅದನ್ನು ರಕ್ಷಿಸಿ, ಪೋಷಿಸುವಂತೆ ಮಕ್ಕಳಲ್ಲಿ ಮನವಿ ಮಾಡಿದರು. ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರಿಗೆ ಸುಮಾರು ಐನೂರಕ್ಕೂ ಅಧಿಕ ಗಿಡಗಳನ್ನು ವಿತರಿಸಿ, ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.