ಬಂಟ್ವಾಳ: ನೀರು ಹೋಗಲು ಚರಂಡಿಯನ್ನು ನಿರ್ಮಾಣ ಮಾಡದೇ ಮಳೆ ನೀರು ಹರಿಯಲು ದಾರಿಯಿಲ್ಲದೇ ರಸ್ತೆಯಲ್ಲೇ ಶೇಖರಣೆಯಾದಾಗ ಕೊನೆಗೆ ಕಾಂಕ್ರಿಟೀಕೃತ ರಸ್ತೆಯನ್ನೇ ತುಂಡರಿಸಿ ನೀರನ್ನು ಪಕ್ಕದ ತೋಡಿಗೆ ಜೋಡಿಸಿದ್ದು ರಸ್ತೆಯಿಲ್ಲದೇ ಸಾರ್ವಜನಿಕರು ಪರದಾಡುವಂತಹ ಸನ್ನಿವೇಶ ಕೈಕಂಬದಲ್ಲಿ ಸೃಷ್ಟಿಯಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಬರುವ ಬಿ.ಸಿ.ರೋಡ್ ಕೈಕಂಬದಲ್ಲಿರುವ ಮುದ್ರಣ ಸಂಸ್ಥೆಯ ಬಳಿ  ಹೊಸ ಕಾಂಕ್ರಿಟ್ ರಸ್ತೆಯು ಹೆದ್ದಾರಿಗೆ ಬರಲು ಹತ್ತಿರ ಹಾಗೂ ಕೈಕಂಬದ ವಾಹನ ದಟ್ಟಣೆಯನ್ನು ತಪ್ಪಿಸಲು ಮೊಡಂಕಾಪಿನಿಂದ ಮಂಗಳೂರಿಗೆ ತೆರಳಲು ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಬಿಸಿರುತ್ತಾರೆ.
 ಶಾಲಾ ವಾಹನಗಳಿಗೂ ಈ ರಸ್ತೆಯು ತುಂಬಾ ಅನುಕೂಲವಾಗಿತ್ತು. ಮೊಡಂಕಾಪು ಬಳಿಯ ವಿದ್ಯಾ ಸಂಸ್ಥೆಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಸೈಕಲ್ ಇಲ್ಲವೇ ಕಾಲುದಾರಿಯಾಗಿ ಹೋಗಲು ಈ ರಸ್ತೆಯು ಅವಶ್ಯಕವಾಗಿತ್ತ. ಆದರೆ ಈಗ ರಸ್ತೆಯನ್ನು ಕಡಿತಗೊಳಿಸಿ  ಹೊಂಡ ನಿರ್ಮಿಸಿದ ನಂತರ ಅದರ ಗೋಜಿಗೇ ಹೋಗದೆ ಈ ರಸ್ತೆಯಲ್ಲಿ ಹೋಗುವವರು ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಯನ್ನು ತುಂಡರಿಸಿ ತಿಂಗಳು ಒಂದಾದರೂ ಯಾವುದೇ ಅಧಿಕಾರಿವರ್ಗ ಇತ್ತ ಬರಲಿಲ್ಲ. ಜನರಿಗೆ ಹಾದು ಹೋಗಲು ಯಾವುದೇ ವ್ಯವಸ್ಥೆಯನ್ನೂ ಮಾಡಲಿಲ್ಲ. ಪುಟ್ಟ ಮಕ್ಕಳನ್ನು ಈ ಭಾಗದ ಪೋಷಕರು ಈ ರಸ್ತೆಯಲ್ಲಿ ಕಳುಹಿಸುವುದನ್ನೇ ನಿಲ್ಲಿಸಿದ್ದಾರೆ.
ಇಲ್ಲಿರುವ ರಸ್ತೆಯು ಎರಡು ಬದಿಯಲ್ಲಿ ಎತ್ತರವಾಗಿದ್ದು ಹೊಂಡ ತೋಡಿದ ಭಾಗವು ತಗ್ಗು ಪ್ರದೇಶವಾಗಿದ್ದು ದುರಸ್ತಿಯ ಯಾವುದೇ ನಾಮ ಫಲಕವನ್ನೂ ಹಾಕದೇ ಇರುವುದರಿಂದ ಈ ರಸ್ತೆ ವಾಹನ ಸವಾರರು ರಸ್ತೆಯ ತುಂಡರಿಸಿರುವುದನ್ನು ಮರೆತು ಎಷ್ಟೋ ಜನ ಈ ಹೊಂಡಕ್ಕೆ ಬಿದ್ದ ಘmನೆಯೂ ನಡೆದಿದೆ. ನೀರು ಹಾದು ಹೋಗಲು ಚರಂಡಿ ನಿರ್ಮಾಣ ಮಾಡಿರುವುದು ಸರಿ. ಆದರೆ ಮಾಡಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸದೆ ಅರ್ದದಲ್ಲೇ ಕೆಲಸವನ್ನು ನಿಲ್ಲಿಸಿ ತಮ್ಮ ಪಾಡಿಗೆ ಇರುವ ಪುರಸಭೆಯು ಸಾರ್ವಜನಿಕರ ಮೂಲ ಸೌಕರ್ಯದಲ್ಲೊಂದಾದ ರಸ್ತೆಯನ್ನು ನಿರ್ಮಾಣ ಮಾಡಿದರೂ ಅದು ಪ್ರಯೋಜನಕ್ಕಿಲ್ಲದಂತಾಗಿದೆ. ಮಳೆಗಾಲದ ಈ ಸಮಯದಲ್ಲಿ ಸಮರ್ಪಕ ರಸ್ತೆಯ ಅಗತ್ಯ ತುಂಬಾ ಇದೆ. ಆದರೆ ಇಲ್ಲಿಯ ಜನರಿಗೆ ಮಳೆಗಾಲದಲ್ಲಿಯೇ ತೊಂದರೆಯುಂಟಾಗಿರುವುದು ವಿಪರ್ಯಾಸವೇ ಸರಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here